ಅಪ್ರಾಪ್ತ ಬಾಲಕಿಯ ನಕಲಿ ಪ್ರೊಫೈಲ್ ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಪೋಸ್ಟ್ ಮಾಡಿ ಮತ್ತು ಆಕೆಯ ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಕ್ಕಾಗಿ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಆರೋಪಿ ಅರುಣ್ ಕುಮಾರ್ ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ನಿವಾಸಿಯಾಗಿದ್ದು, ಕೇಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮತ್ತು ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಕ್ಕೆ ಬಂದಿದ್ದರು. ಹುಡುಗಿ ನಂತರ ಅವನೊಂದಿಗೆ ಮಾತನಾಡಲು ನಿರಾಕರಿಸಿ ಎಲ್ಲಾ ಸಂವಹನವನ್ನು ಕೊನೆಗೊಳಿಸಿದಳು. ಇದಾದ ಬಳಿಕ ಅರುಣ್ ಕುಮಾರ್ ಆಕೆಯ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಯಾರೋ ತನ್ನ ಹೆಸರಿನಲ್ಲಿ ನಕಲಿ ಪ್ರೊಫೈಲ್ ಅನ್ನು ರಚಿಸಿದ್ದಾರೆ, ಆಕ್ಷೇಪಾರ್ಹ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ತನ್ನ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ ಎಂದು ಬಾಲಕಿ ದೂರು ನೀಡಿರೋದಾಗಿ ಪೊಲೀಸ್ ಉಪ ಆಯುಕ್ತ (ಶಹದಾರ) ರೋಹಿತ್ ಮೀನಾ ಹೇಳಿದ್ದಾರೆ.
ತನಿಖೆಯ ನಂತರ ಅರುಣ್ ಕುಮಾರ್ ನನ್ನು ಭಾನುವಾರ ಬಂಧಿಸಲಾಗಿದೆ. ಆತನಿಂದ ನಕಲಿ ಐಡಿ ಸೃಷ್ಟಿಸಲು ಬಳಸಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.