ವಾರಸುದಾರರಿಲ್ಲದೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇದ್ದ ಬರೋಬ್ಬರಿ 35,102 ಕೋಟಿ ರೂಪಾಯಿ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದು, ಒಟ್ಟು 10.24 ಕೋಟಿ ಖಾತೆಗಳಲ್ಲಿ ಈ ಹಣ ಇತ್ತು ಎಂದು ತಿಳಿಸಿದ್ದಾರೆ.
ಈ ಖಾತೆಗಳಲ್ಲಿ ಕಳೆದ ಹತ್ತು ವರ್ಷದಿಂದ ಯಾವುದೇ ವಹಿವಾಟು ನಡೆದಿರಲಿಲ್ಲ ಎಂದು ಅವರು ತಿಳಿಸಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಅತ್ಯಧಿಕ ಅಂದರೆ 8,086 ಕೋಟಿ ರೂಪಾಯಿ ಠೇವಣಿ ಹೊಂದಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 5,340 ಕೋಟಿ ರೂಪಾಯಿ, ಕೆನರಾ ಬ್ಯಾಂಕಿನಲ್ಲಿ 4,558 ಕೋಟಿ ರೂಪಾಯಿ ಹಾಗೂ ಬ್ಯಾಂಕ್ ಆಫ್ ಬರೋಡದಲ್ಲಿ 3,904 ಕೋಟಿ ರೂಪಾಯಿ ವಾರಸುದಾರರಿಲ್ಲದ ಠೇವಣಿ ಹಣ ಇತ್ತು ಎಂದು ಮಾಹಿತಿ ನೀಡಿದ್ದಾರೆ.