ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜಕೀಯ ಪಕ್ಷಗಳ ನಾಯಕರು ಯಾವುದೇ ಸಭೆ ನಡೆಸಬೇಕೆಂದರೂ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಹೀಗೆ ಅನುಮತಿ ಪಡೆಯದೆ ಬೆಂಗಳೂರಿನಲ್ಲಿ ತಮ್ಮ ಕ್ಷೇತ್ರದ ಜನರ ಸಭೆ ನಡೆಸುತ್ತಿದ್ದ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರಿಗೆ ಇದರ ಬಿಸಿ ತಟ್ಟಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸಭೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ರೇಣುಕಾಚಾರ್ಯ ಇದನ್ನು ಲೆಕ್ಕಿಸದೆ ಭಾಷಣ ಮುಂದುವರಿಸಿದ ವೇಳೆ ಅವರ ಕೈಯಿಂದ ಮೈಕ್ ಕಸಿದುಕೊಂಡಿದ್ದು, ಆಗ ರೇಣುಕಾಚಾರ್ಯ ಅನಿವಾರ್ಯವಾಗಿ ಸಭೆ ಮೊಟಕುಗೊಳಿಸಿದ್ದಾರೆ.
ಭಾನುವಾರದಂದು ಶಿವಾನಂದ ಸರ್ಕಲ್ ಬಳಿಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಹೊನ್ನಾಳಿ ಕ್ಷೇತ್ರದ ಜನರ ಸಭೆ ಆಯೋಜಿಸಿದ್ದು, ಇದರ ಜೊತೆಗೆ ಮಧ್ಯಾಹ್ನಕ್ಕೆ ಭರ್ಜರಿ ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು. ರೇಣುಕಾಚಾರ್ಯ ಅವರು ಸಭೆಗೆ ಬಂದಿದ್ದ ಜನರಿಗಾಗಿ ಕ್ಯಾಟರಿಂಗ್ ನಿಂದ ಊಟ ತರಿಸಿದ್ದು, ಅಧಿಕಾರಿಗಳು ಅದನ್ನೂ ಸಹ ವಾಪಸ್ ಕಳುಹಿಸಿದ್ದಾರೆ.