ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರ ಒದಗಿಸುವಂತೆ ಕೇಳಿ 25 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಪ್ರಧಾನಮಂತ್ರಿ ಮೋದಿಯವರ ಪದವಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕೇಜ್ರಿವಾಲ್, ಹಾಗಾದರೆ ಪ್ರಧಾನಮಂತ್ರಿಗಳ ಪದವಿ ನಕಲಿಯೇ ಎಂದು ಪ್ರಶ್ನಿಸಿದ್ದಾರೆ.
ಗುಜರಾತ್ ಹೈಕೋರ್ಟ್ ಕೇಜ್ರಿವಾಲ್‌ಗೆ ದಂಡ ವಿಧಿಸಿ ಪ್ರಧಾನ ಮಂತ್ರಿಗಳ ಪದವಿ ವಿವರ ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ ಒಂದು ದಿನದ ನಂತರ ಕೇಜ್ರಿವಾಲ್ ಮತ್ತೊಮ್ಮೆ ಗುಡುಗಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕೇಜ್ರಿವಾಲ್, “ಅಶಿಕ್ಷಿತ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ಅಪಾಯಕಾರಿ. ಪ್ರಧಾನಿ ಪದವಿ ತೋರಿಸದಿರುವುದಕ್ಕೆ ಎರಡು ಕಾರಣಗಳಿರಬಹುದು ಎಂದು ಆರೋಪಿಸಿದ ಕೇಜ್ರಿವಾಲ್ ‘ಅವರ ಅಹಂಕಾರದಿಂದಲೇ ಅದನ್ನು ಯಾರಿಗೂ ತೋರಿಸಬೇಕು ಎಂದು ಅನಿಸುತ್ತಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಇನ್ನೊಂದು ಪ್ರಶ್ನೆಯೆಂದರೆ ಅವರ ಪದವಿ ನಕಲಿಯಾಗಿರಬಹುದು. ಪ್ರಧಾನಿ ಪದವಿ ನಕಲಿಯೇ ?” ಎಂದು ಕೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯ ಬಗ್ಗೆ ಮಾಹಿತಿ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) 2016 ರ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಎಎಪಿ ಮುಖ್ಯಸ್ಥ ಕೇಜ್ರಿವಾಲ್ ರ ಆರ್‌ಟಿಐ ಅರ್ಜಿಯನ್ನು ಗಮನಿಸಿದ ಕೋರ್ಟ್, ಕೇಜ್ರಿವಾಲ್ ರ ಮನವಿ ಮತ್ತು ಸಿಐಸಿಯ ಆದೇಶ ಆರ್‌ಟಿಐ ಕಾಯ್ದೆಯ ವಿವೇಚನಾರಹಿತ ದುರುಪಯೋಗ ಎಂದು ಪರಿಗಣಿಸಿ, ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಗೆ 25,000 ರೂಪಾಯಿ ದಂಡವನ್ನು ವಿಧಿಸಿದೆ.