alex Certify ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್: ದೇಶದಲ್ಲೇ ಮೊದಲಿಗೆ ಶ್ರಮಿಕ್ ನಿವಾಸ್ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್: ದೇಶದಲ್ಲೇ ಮೊದಲಿಗೆ ಶ್ರಮಿಕ್ ನಿವಾಸ್ ಯೋಜನೆ ಜಾರಿ

 ಬೆಂಗಳೂರು: ಇತರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ವಸತಿ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ್’ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯಿಂದಾಗಿ ಶ್ರಮಿಕ ವರ್ಗವೂ ಸಹ ಗೌರವದ ಬದುಕು ಕಂಡುಕೊಳ್ಳಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.

ದೊಡ್ಡಬಳ್ಳಾಪುರದ ಓಬದೇನಹಳ್ಳಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮಹತ್ವಾಕಾಂಕ್ಷೆಯ “ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ಬೃಹತ್ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ದೇಶದಲ್ಲೇ ಮೊಟ್ಟ ಮೊದಲು ಎನ್ನಬಹುದಾದ ಶ್ರಮಿಕ್ ನಿವಾಸ್ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. 2006ರಲ್ಲಿ ಜಾರಿಗೆ ಬಂದಿರುವ ಕಾನೂನಿನಂತೆ ರಸ್ತೆ, ಮನೆ, ಬೃಹತ್ ವಸತಿ ಗೃಹ ಸೇರಿದಂತೆ ಯಾವುದೇ ನಿರ್ಮಾಣ ಆಗಬೇಕಿದ್ದರೆ ನಿರ್ಮಾಣಕ್ಕೂ ಮುನ್ನ ಶೇ.1ರಷ್ಟನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು. ತಪ್ಪಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇರುತ್ತದೆ ಎಂದ ಸಚಿವ ಹೆಬ್ಬಾರ್, ಈ ಹಣದಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡುತ್ತಿದೆ ಎಂದರು.

ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ‘ಶ್ರಮಿಕ್ ನಿವಾಸ್’ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, 138.71 ಕೋಟಿ ವೆಚ್ಚದಲ್ಲಿ ಶಿವಮೊಗ್ಗ, ಕಲ್ಬುರ್ಗಿ, ದಾವಣಗೆರೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೋಜನೆಯು ಪ್ರಗತಿಯ ಹಂತದಲ್ಲಿವೆ. ಅದರಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಓಬದೇವನಹಳ್ಳಿಯಲ್ಲಿ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಸತಿ ಸಮುಚ್ಛಯ ಯೋಜನೆಯಲ್ಲಿ 10 ಕೋಟಿ ವೆಚ್ಛದಲ್ಲಿ ನಿರ್ಮಿಸಲಾದ ಮೊದಲ ಹಂತದ ಸಮುಚ್ಚಯ ಕಾಮಗಾರಿಯು ಪೂರ್ಣಗೊಂಡಿದ್ದು ಲೋಕಾರ್ಪಣೆಗೊಳಿಸಲಾಗಿದೆ ಮತ್ತು ಉಳಿಕೆ 30 ಕೋಟಿ ವೆಚ್ಛದ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸಚಿವ ಹೆಬ್ಬಾರ್ ಮಾಹಿತಿ ನೀಡಿದರು.

ಶ್ರಮಿಕ್ ನಿವಾಸ್ ಯೋಜನೆಯಡಿ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯಗಳು ನಿರ್ಮಾಣವಾಗುತ್ತಿದೆ. ಏಕ ವಸತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದ್ದು, ಏಕ ಹಾಸಿಗೆ ವ್ಯವಸ್ಥೆ ಮತ್ತು ದ್ವಿ-ಹಾಸಿಗೆ ವ್ಯವಸ್ಥೆ ಲಭಿಸಲಿದೆ. ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

“ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಶ್ರಮಿಕ್ ನಿವಾಸ್” ಯೋಜನೆಯನ್ನು ಜಾರಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೊಡ್ಡಬಳ್ಳಾಪುರ ಶಾಸಕ ವೆಂಕಟರಮರಯ್ಯ ಅವರು ತಮ್ಮ ಕ್ಷೇತ್ರದ ಓಬದೇನಹಳ್ಳಿಯಲ್ಲಿ ಕಾರ್ಮಿಕ ಇಲಾಖೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಶ್ರಮಿಕ್ ನಿವಾಸ್ ಯೋಜನೆಯಡಿ  ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಗೊಳಿಸಿರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಪ್ರಸಾದ್ ಎಂ.ಪಿ, ಮಂಡಳಿ ಜಂಟಿ ಕಾರ್ಯದರ್ಶಿ ಡಾ. ಶಿವಪುತ್ರ ಬಾಬುರಾವ್, ಕಲ್ಯಾಣ ಆಯುಕ್ತರಾದ ಟಿ. ಆಂಜನೇಯ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ತೇಜಸ್ ಕುಮಾರ್, ಮಂಡಳಿ ಸದಸ್ಯರಾದ ವೆಂಕಟೇಶ್, ಶಿವಾನಿ ಶಾಂತರಾಮ್ ಸೇರಿದಂತೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...