ತಾಲಿಬಾನ್ ಅಧಿಕಾರದಲ್ಲಿರುವ ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಶಾಲೆಯತ್ತ ಬರುವುದು ಕನಸಿನ ಮಾತು ಎಂಬಂತಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಅಫ್ಘನ್ ಉದ್ಯಮಿಯೊಬ್ಬರು ಹೆಣ್ಣು ಮಕ್ಕಳಿಗೆ ತೆರೆಮರೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮರಳುವುದಕ್ಕೂ ಮುನ್ನ ಕಾಬೂಲ್‌ನಲ್ಲಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದ 43 ವರ್ಷ ವಯಸ್ಸಿನ ಈ ಮಹಿಳಾ ಉದ್ಯಮಿ, ತಾಲಿಬಾನ್ ಮುಷ್ಠಿಗೆ ತಮ್ಮ ದೇಶ ಸಿಲುಕಿದಾಗಲೂ ಸಹ ಅಲ್ಲಿಯೇ ಉಳಿದುಕೊಂಡಿದ್ದಾರೆ.
ತಮ್ಮ ತಾಜ್ ಬೇಗಮ್ ರೆಸ್ಟೋರೆಂಟ್ ಅನ್ನು ತಾಲಿಬಾನ್ ಆಡಳಿತ ಬರುತ್ತಲೇ ಮುಚ್ಚಬೇಕಾಗಿ ಬಂದಿದ್ದು ಭೂಕಂಪನದಿಂದ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗಿದೆ ಎಂದು ತಿಳಿಸುವ ಈಕೆ, ಇಷ್ಟೆಲ್ಲಾ ಕಷ್ಟಗಳ ನಡುವೆಯೂ ತಮ್ಮ ದೇಶ ಬಿಟ್ಟು ಹೋಗಲು ಮನಸ್ಸು ಮಾಡಲಿಲ್ಲ.
“ಭೂಮಿ ಮೇಲಿರುವ ಸಮುದಾಯದ ಅರ್ಧದಷ್ಟು ಅದಾಗಲೇ ನಶಿಸಿಹೋಗಿದೆ. ಒಬ್ಬ ಮಹಿಳೆಯಾಗಿ, ಕೇವಲ ನನ್ನ ಹಿತಾಸಕ್ತಿ ಮಾತ್ರವಲ್ಲದೇ ಎಲ್ಲ ಮಹಿಳೆಯರ ಪರವಾಗಿ ದುಡಿಯುವ ಹೊಣೆಗಾರಿಕೆಯನ್ನು ನನಗೆ ನಾನೇ ತೆಗೆದುಕೊಂಡಿದ್ದೇನೆ” ಎನ್ನುತ್ತಾರೆ ಈಕೆ.
ಸರ್ಕಾರದ ಬದಲಾವಣೆಯಾದ ಬೆನ್ನಿಗೆ ಮದರ್ ಎಜುಕೇಶನ್ ಸೆಂಟರ್ ಎಂಬ ಸಂಸ್ಥೆ ಸ್ಥಾಪಿಸಿ, 500ಕ್ಕೂ ಹೆಚ್ಚಿನ ಹೆಣ್ಣು ಮಕ್ಕಳಿಗೆ ಗಣಿತ, ಭೌತಶಾಸ್ತ್ರ, ಪೇಂಟಿಂಗ್, ಛಾಯಾಗ್ರಹಣ, ಆಭರಣ ಸೃಷ್ಟಿ, ಇಂಗ್ಲಿಷ್ ಭಾಷೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಅಶ್ರಫ್ ಘನಿ ಸರ್ಕಾರದ ಪತನದ ಬಳಿಕ ಕಾಬೂಲ್ ತಾಲಿಬಾನ್ ತೆಕ್ಕೆಗೆ ಮರಳಿದೆ. ಈ ಬದಲಾವಣೆಯಿಂದ ಅತಿ ಹೆಚ್ಚು ನರಳುತ್ತಿರುವವರು ಅಲ್ಲಿನ ಮಹಿಳೆಯರು. ಮಹಿಳೆಯರಿಗೆ ಸೀಮಿತ ಸ್ವಾತಂತ್ರ‍್ಯ ಕೊಡಲಾಗಿದ್ದು, ಪುರುಷ ಸಂಗಾತಿಗಳಿಲ್ಲದೇ ಅವರು ಹೊರಗೆ ಬರುವಂತೆಯೇ ಇಲ್ಲವೆಂಬಂತಾಗಿದೆ.
ದೇಶದಲ್ಲಿರುವ ಎಲ್ಲ ಶಾಲೆಗಳನ್ನು ಮಾರ್ಚ್ 23, 2022ರ ವೇಳೆಗೆ ಮರು ಆರಂಭಿಸುವುದಾಗಿ ತಾಲಿಬಾನ್ ತಿಳಿಸಿದ್ದರೂ ಸಹ ಇಂದಿಗೂ ಈ ಮಾತನ್ನು ಉಳಿಸಿಕೊಂಡಿಲ್ಲ. ಈ ಅನಿರ್ದಿಷ್ಟಾವಧಿ ಬಂದ್ ಎಲ್ಲಿಯವರೆಗೆ ಎಂಬುದು ತಿಳಿದು ಬಂದಿಲ್ಲ.
ಅಫ್ಘಾನಿಸ್ತಾನದ ಮಹಿಳಾ ಹಕ್ಕುಗಳು ಆ ದೇಶದ ಆಂತರಿಕ ವಿಷಯವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯ ಈ ವಿಚಾರದಲ್ಲಿ ತಲೆ ಹಾಕುವಂತಿಲ್ಲ ಎನ್ನುತ್ತಿದೆ ತಾಲಿಬಾನ್.