ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತನ್ನ ಸಂಸದೀಯ ಪಕ್ಷದ ನಾಯಕ ಸಂಜಯ್ ರಾವುತ್ ಅವರನ್ನು ವಜಾಗೊಳಿಸಿದೆ. ಸಂಸದ ಗಜಾನನ ಕೀರ್ತಿಕರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ಅವರಿಗೆ ಪತ್ರ ಬರೆದಿರುವ ಶಿವಸೇನೆಯ ಮುಖ್ಯ ನಾಯಕ ಶಿಂಧೆ, ಕೀರ್ತಿಕರ್ ಅವರನ್ನು ಶಿವಸೇನೆ ಸಂಸದೀಯ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ.
ಸಂಸತ್ ಭವನದ ಮೂರನೇ ಮಹಡಿಯಲ್ಲಿರುವ ಸಂಸದೀಯ ಪಕ್ಷದ ಕಚೇರಿಯಲ್ಲಿ ಶಿವಸೇನೆ ಮುಖಂಡರು ಗುರುವಾರ ಕೀರ್ತಿಕರ್ ಅವರನ್ನು ಸನ್ಮಾನಿಸಿದರು.
ಲೋಕಸಭೆಯಲ್ಲಿನ 18 ಶಿವಸೇನಾ ಸದಸ್ಯರಲ್ಲಿ, ನಾಲ್ವರು ಉದ್ಧವ್ ಠಾಕ್ರೆಯೊಂದಿಗೆ ತಮ್ಮ ನಿಷ್ಠೆಯನ್ನು ಹೊಂದಿದ್ದಾರೆ. ಶಿವಸೇನೆಯು ರಾಜ್ಯಸಭೆಯಲ್ಲಿ ಮೂವರು ಸದಸ್ಯರನ್ನು ಹೊಂದಿದೆ. ಸಂಜಯ್ ರಾವತ್, ಅನಿಲ್ ದೇಸಾಯಿ ಮತ್ತು ಪ್ರಿಯಾಂಕಾ ಚತುರ್ವೇದಿ ಅವರು ಉದ್ಧವ್ ಠಾಕ್ರೆ ಅವರ ನಿಷ್ಠರಾಗಿದ್ದಾರೆ.
ಠಾಕ್ರೆ ಅವರು ಪಕ್ಷದ ಮೂಲ ಆದರ್ಶಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿ ಏಕನಾಥ್ ಶಿಂಧೆ ಕಳೆದ ವರ್ಷ ಶಿವಸೇನೆಯನ್ನು ವಿಭಜಿಸಿದ್ದರು.
ಕಳೆದ ತಿಂಗಳು, ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿತು ಮತ್ತು ಅದಕ್ಕೆ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ನಿಗದಿಪಡಿಸಿದೆ.