ಬೆಂಗಳೂರು: ಕಾನ್ಸ್ ಟೇಬಲ್ ಒಬ್ಬರು ಕಳ್ಳತನದ ವಾಹನವನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ತೆಗೆದುಕೊಂಡು ಕಳುವಾಗಿರುವ ಗಾಡಿಯ ಬಗ್ಗೆ ಮಾಹಿತಿಯನ್ನೇ ನೀಡದೇ ಕರ್ತವ್ಯ ಲೋಪ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಎರಡು ವರ್ಷಗಳ ಹಿಂದೆ ನಾಗರಾಜ್ ಎಂಬುವವರು ತಮ್ಮ ಗಾಡಿ ಡಿಯೋ ಹೋಂಡಾ ಕಳುವಾಗಿದ್ದಾಗಿ ಗಂಗಮ್ಮ ಗುಡಿ ಠಾಣೆಯಲ್ಲಿ ದೂರು ನೀಡಿದ್ದರು. ನಾಲ್ಕು ತಿಂಗಳಾದರೂ ಗಾಡಿ ಸಿಕ್ಕಿರಲಿಲ್ಲ, ಪೊಲೀಸರನ್ನು ವಿಚಾರಿಸಿದರೆ ಗಾಡಿ ಸಿಗುತ್ತೇ ಎನ್ನುತ್ತ ದಿನ ದೂಡುತ್ತಿದ್ದರು. ಹೀಗೆ ಎರಡು ವರ್ಷ ಕಳೆದರೂ ಗಾಡಿ ಸಿಕ್ಕಿರಲಿಲ್ಲ.
ಕಳೆದ ತಿಂಗಳು ಟ್ರಾಫಿಕ್ ಪೊಲೀಸರು ಶೇ.50 ರಷ್ಟು ದಂಡ ಕಟ್ಟುವುದಕ್ಕೆ ಆಫರ್ ನೀಡಿದಾಗ ಗಾಡಿ ಮಾಲೀಕ ನಾಗರಾಜು ಸುಮ್ಮನೇ ಗಾಡಿ ಫೈನ್ ಎಷ್ಟಿದೆ ಎಂದು ನೋಡಲು ಹೋದಾಗ ತಮ್ಮ ಹೋಂಡಾ ಗಾಡಿ ಓರ್ವ ಮಹಿಳೆ ಬಳಿ ಇದ್ದುದು ಗೊತ್ತಾಗಿದೆ. ಆಗ ಮಾಲೀಕ ತನ್ನ ಗಾಡಿ ಕಳುವಾಗಿದ್ದರೂ ದಂಡ ಹೇಗೆ ಬಿದ್ದಿದೆ ಎಂದು ಅಚ್ಚರಿಯಾಗಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟಾಗ ಇದರಲ್ಲಿ ಹೆಡ್ ಕಾನ್ಸ್ ಟೇಬಲ್ ಕೈವಾಡ ಇರುವುದು ಗೊತ್ತಾಗಿದೆ.
ಬ್ಯಾಡರಹಳ್ಳಿಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ರವಿ ಎಂಬುವವರು ಮಾಲೀಕನಿಗೆ ಗೊತ್ತಿಲ್ಲದೇ ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಕಳುವಾದ ಗಾಡಿಯನ್ನು ಮಾಲೀಕನಿಗೆ ಮಾಹಿತಿ ನೀಡದೇ ಹರಾಜಿನಲ್ಲಿ ಹೆಡ್ ಕಾನ್ಸ್ ಟೇಬಲ್ ಖರೀದಿಸುವ ಮೂಲಕ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ.