ಬೆಂಗಳೂರು: ಮಾರ್ಚ್ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಸೇರಿದಂತೆ ಯಾವುದೇ ಧರ್ಮಧಾರಿತ ಬಟ್ಟೆ ಧರಿಸಿ ಬಂದರೆ ವಿಧ್ಯಾರ್ಥಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದ್ದು, ಕಳೆದ ಸಾಲಿನ ಪರೀಕ್ಷೆಯ ವೇಳೆಯಲ್ಲಿ ಅನುಸರಿಸಲಾಗಿದ್ದ ನಿಯಮ ಮುಂದುವರೆಯಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಮವಸ್ತ್ರ ಧರಿಸಿ ಬರಬಹುದು ಅಥವಾ ಬೇರೆ ಸಾಮಾನ್ಯ ಉಡುಪು ಧರಿಸಿ ಬರಬಹುದು. ಹಿಜಾಬ್ ಸೇರಿದಂತೆ ಯಾವುದೇ ಧರ್ಮಾಧಾರಿತ ಉಡುಪುಗಳು ಸಮವಸ್ತ್ರಕ್ಕೆ ಸಂಬಂಧಿಸಿಲ್ಲ. ಅವುಗಳನ್ನು ಧರಿಸಿ ಬಂದರೆ ಪರೀಕ್ಷೆಗೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕಿಂತ 30 ನಿಮಿಷ ಮೊದಲು ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಫಲಿತಾಂಶ ಉತ್ತಮಪಡಿಸುವ ದೃಷ್ಟಿಯಿಂದ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಗ್ರೇಸ್ ಅಂಕಗಳನ್ನು ನೀಡಲಾಗುವುದು. ಒಟ್ಟಾರೆ ಫಲಿತಾಂಶ 219 ಅಂಕ ಬಂದಿದ್ದು, ಮೂರು ವಿಷಯಗಳಲ್ಲಿ ಪಾಸ್ ಆಗಲು ಗಡಿ ರೇಖೆಯಲ್ಲಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಪಾಸ್ ಮಾಡಲಾಗುವುದು ಎಂದು ಹೇಳಲಾಗಿದೆ.