ಬೆಳಗಾವಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಬಳಿ ದಾಖಲೆಗಳನ್ನು ಕೇಳಿದ್ದಾರೆ. ಈಗ ಬಿಜೆಪಿ ಶಾಸಕರ ಪುತ್ರ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿ ಬಿದ್ದಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಲೂಟಿ ಮಾಡುವುದರಲ್ಲೇ ಮುಳುಗಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಒಳ್ಳೆಯ ಆಡಳಿತ ನೀಡಿಲ್ಲ, ಜನಪರ ಕೆಲಸವನ್ನೂ ಮಾಡಿಲ್ಲ. ಬರಿ ಲೂಟಿ ಹೊಡೆಯುವುದರಲ್ಲಿ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದರು. ಆದರೂ ಯಾವುದೆ ಕ್ರಮ ಕೈಗೊಳ್ಳಲಿಲ್ಲ. ಈ ಮೂಲಕ ಪ್ರಧಾನಿ ಮೋದಿ ಕೂಡ ಸರ್ಕಾರದ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂಬ ಸಂದೇಶ ಜನತೆಗೆ ರವಾನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕುವರ್ಷಗಳು ಕಳೆದರೂ ಯಾವುದೇ ಕೆಲಸ ಮಾಡಿಲ್ಲ, ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.