ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ಸೇರಿದಂತೆ ಎಲ್ಲ ಇಲಾಖೆಗಳಿಂದ ಪರವಾನಿಗೆ ದೊರೆತಿದ್ದು, ಹೀಗಾಗಿ ಪರೀಕ್ಷಾರ್ಥದ ಹಿನ್ನೆಲೆಯಲ್ಲಿ ಮಂಗಳವಾರದಂದು ವಾಯು ಸೇನೆಯ ಮೊಟ್ಟ ಮೊದಲ ವಿಮಾನವು ಲ್ಯಾಂಡ್ ಆಗಿದೆ.
ನವದೆಹಲಿಯಿಂದ ಮಧ್ಯಾಹ್ನ 12 ಗಂಟೆಗೆ ಟೇಕಾಫ್ ಆದ ವಾಯು ಸೇನೆಯ ಬೋಯಿಂಗ್ 737-7 ಹೆಚ್1 ಮಾದರಿಯ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ 2-30ಕ್ಕೆ ಬಂದಿಳಿದಿದೆ. ಮತ್ತೆ ಇಲ್ಲಿಂದ 3 ಗಂಟೆಗೆ ಟೇಕಾಫ್ ಆಗಿ ನವದೆಹಲಿಗೆ ತೆರಳಿದೆ. ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಸುಸೂತ್ರವಾಗಿ ನಡೆದಿದೆ ಎಂದು ಮೂಲಗಳು ಹೇಳಿವೆ. ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ವಿಮಾನಕ್ಕೆ ಎರಡು ಅಗ್ನಿಶಾಮಕ ದಳದಿಂದ ʼವಾಟರ್ ಸೆಲ್ಯೂಟ್ʼ ಮಾಡುವ ಮೂಲಕ ಸ್ವಾಗತ ಕೋರಲಾಯಿತು.
ಶಿವಮೊಗ್ಗ ನಿಲ್ದಾಣದಲ್ಲಿ ಮೊದಲ ವಿಮಾನ ಬಂದಿಳಿದಿರುವ ಹಿನ್ನೆಲೆಯಲ್ಲಿ ನಗರದ ಜನತೆ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಹಳಷ್ಟು ಜನ ತಮ್ಮ ಮೊಬೈಲ್ ಗಳಲ್ಲಿ ವಿಮಾನ ಹಾರಾಟದ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.