ಹೈದರಾಬಾದ್: ವಧುವಿನ ಮನೆಯವರು ಬಳಸಿದ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುತ್ತಿದ್ದಾರೆ ಎಂದು ವರನೊಬ್ಬ ಕೊನೆ ಕ್ಷಣದಲ್ಲಿ ಮದುವೆ ರದ್ದುಗೊಳಿಸಿದ್ದಾನೆ.
ಹೈದರಾಬಾದ್ ನಲ್ಲಿ ಘಟನೆ ನಡೆದಿದ್ದು, ವರನ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಮೌಲಾಲಿಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುವ 25 ವರ್ಷದ ಮೊಹಮ್ಮದ್ ಝಾಕೀರ್ ವಿವಾಹ ಬಂಡ್ಲಗುಡಾದ ರೆಹಮತ್ ಕಾಲೋನಿಯಲ್ಲಿ ವಾಸಿಸುವ 22 ವರ್ಷದ ಹೀನಾ ಫಾತಿಮಾ ಅವರೊಂದಿಗೆ ನಿಶ್ಚಯವಾಗಿತ್ತು.
ಭಾನುವಾರ ಮಸೀದಿಯೊಂದರಲ್ಲಿ ಮದುವೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮದುವೆಯ ಸ್ಥಳವನ್ನು ಅಲಂಕರಿಸಲಾಗಿತ್ತು, ಅತಿಥಿಗಳೂ ಆಗಮಿಸತೊಡಗಿದ್ದರು. ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಆದರೆ ವರ ಝಾಕೀರ್ ಕುಟುಂಬದವರು ಮದುವೆ ಸ್ಥಳಕ್ಕೆ ಬರುತ್ತಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ.
ವರನ ನಿವಾಸಕ್ಕೆ ಹೋಗಿ ಮನೆಯವರನ್ನು ವಿಚಾರಿಸಿದಾಗ, ಅವರಿಗೆ ನೀಡಲಾಗುತ್ತಿರುವ ಪೀಠೋಪಕರಣಗಳ ಬಗ್ಗೆ ಆಕ್ಷೇಪಿಸಿದ್ದಾರೆ. ಪೀಠೋಪಕರಣಗಳನ್ನು ಬಳಸಲಾಗಿದೆ ಎಂದು ದೂರಿದ ಅವರು ವರದಕ್ಷಿಣೆಯಲ್ಲಿ ಹೆಚ್ಚಿನ ವಸ್ತುಗಳನ್ನು ಕೇಳಿದ್ದಾರೆ. ಬಳಸಿದ ಪೀಠೋಪಕರಣಗಳನ್ನು ನೀಡಿದ ಕಾರಣಕ್ಕೆ ಮೊಹಮ್ಮದ್ ಝಾಕೀರ್ ತನ್ನ ಮಗಳ ಮದುವೆಗೆ ನಿರಾಕರಿಸಿದ್ದಾನೆ ಎಂದು ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯವರನ್ನು ವಿಚಾರಿಸಲು ಹೋದಾಗ ತನ್ನನ್ನು ನಿಂದಿಸಿ ತಿರುಗಿಬಿದ್ದಿರುವುದಾಗಿಯೂ ಹೇಳಿಕೊಂಡಿದ್ದಾರೆ.
ವರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಖಚಿತಪಡಿಸಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.