ಮಹಿಳೆಯರಲ್ಲಿ ಮುಟ್ಟಿನ ನೋವು, ಸೆಳೆತ ಇವೆಲ್ಲ ಸಾಮಾನ್ಯ, ಕೆಲವರಿಗೆ ಹೊಟ್ಟೆ ನೋವು, ಬೆನ್ನು ನೋವು, ಮೂಡ್ ಸ್ವಿಂಗ್ ಹೀಗೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಪೀರಿಯಡ್ಸ್ ಅಂದ್ರೆ ಪ್ರತಿ ಮಹಿಳೆಗೂ ಒಂದು ರೀತಿಯ ಕಿರಿಕಿರಿ.
ಹಾಗಾಗಿ ಮದುವೆ, ಪಾರ್ಟಿ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಮಹಿಳೆಯರು ಮುಟ್ಟನ್ನು ಮುಂದೂಡುವ ಔಷಧಿಗಳನ್ನು ಸೇವಿಸುತ್ತಾರೆ. ಈ ಔಷಧಿಗಳು ಪೀರಿಯಡ್ ಅವಧಿಯನ್ನು ಹೆಚ್ಚಿಸುತ್ತವೆ.
ಆದರೆ ಈ ಔಷಧಿಗಳು ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು. ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳು ಮುಟ್ಟಿನ ಅವಧಿಯನ್ನು ನಿರ್ಧರಿಸುತ್ತದೆ. ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳು ನೊರೆಥಿಸ್ಟೆರಾನ್ ಅನ್ನು ಹೊಂದಿರುತ್ತವೆ. ಇದು ಪ್ರೊಜೆಸ್ಟರಾನ್‌ನ ಸಂಶ್ಲೇಷಿತ ರೂಪ. ಈ ಔಷಧಿಗಳನ್ನು ಬಳಸುವುದರ ಮೂಲಕ ಸುಮಾರು ಎರಡು ವಾರಗಳವರೆಗೆ ಮುಟ್ಟನ್ನು ಮುಂದೂಡಬಹುದು.
ವೈದ್ಯರನ್ನು ಸಂಪರ್ಕಿಸಿದ ನಂತರ, ಮುಟ್ಟಿನ ಪ್ರಾರಂಭದ ಮೂರು ದಿನಗಳ ಮೊದಲು ಈ ಟ್ಯಾಬ್ಲೆಟ್ ಅನ್ನು ಸೇವಿಸಬಹುದು. ಎಲ್ಲಿಯವರೆಗೆ ನಿಮ್ಮ ಪಿರಿಯಡ್ಸ್ ಬರಲು ನೀವು ಬಯಸುವುದಿಲ್ಲವೋ ಅಲ್ಲಿಯವರೆಗೆ ವೈದ್ಯರ ಸಲಹೆಯಂತೆ ಪ್ರತಿದಿನ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬಹುದು. ಆದರೆ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ಸುಮಾರು ಒಂದು ವಾರದೊಳಗೆ ಪೀರಿಯಡ್ಸ್ ಬರುತ್ತದೆ.
ಮುಟ್ಟಿನ ವಿಳಂಬಕ್ಕೆ ಔಷಧಿ ತೆಗೆದುಕೊಳ್ಳುವುದು ಸುರಕ್ಷಿತವೇ ?
ಮುಟ್ಟಿನ ವಿಳಂಬಕ್ಕೆ ಔಷಧಿಗಳನ್ನು ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತವಲ್ಲ. ಅನೇಕ ಮಹಿಳೆಯರು ಯಾವುದೇ ವೈದ್ಯರ ಸಲಹೆಯಿಲ್ಲದೆ ಈ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಭವಿಷ್ಯದಲ್ಲಿ ಹಾನಿಕಾರಕವಾಗುತ್ತದೆ. ಮದುವೆ, ಪಾರ್ಟಿ, ಫಂಕ್ಷನ್ ಅಥವಾ ಇನ್ನಾವುದೇ ದೊಡ್ಡ ಸಮಾರಂಭದಂತಹ ಕೆಲವು ಸಂದರ್ಭಗಳಲ್ಲಿ ಈ ಮಾತ್ರೆಗಳು ನಿಮಗೆ ಸಹಾಯಕವಾಗಬಲ್ಲವು ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಅಂತಹ ಸಂದರ್ಭಗಳಲ್ಲಿ ಮಹಿಳೆಯರು ಸಂಪೂರ್ಣ ಉತ್ಸಾಹದಿಂದ ಭಾಗವಹಿಸಲು ಬಯಸುತ್ತಾರೆ, ಆದರೆ ಪಿರಿಯಡ್ಸ್ ಸಮಸ್ಯೆಗಳಿಂದಾಗಿ ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ.
ಈ ಔಷಧಿಗಳನ್ನು ಅತಿಯಾಗಿ ಸೇವಿಸಿದರೆ ಅನೇಕ ಅಪಾಯಗಳನ್ನು ಉಂಟುಮಾಡಬಹುದು. ಪದೇ ಪದೇ ಈ ಟ್ಯಾಬ್ಲೆಟ್ ತೆಗೆದುಕೊಳ್ಳುವುದರಿಂದ ಹಾರ್ಮೋನ್ ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಋತುಚಕ್ರದಲ್ಲಿ ಅಡಚಣೆಗಳನ್ನು ಉಂಟುಮಾಡುತ್ತದೆ. ಈ ಮಾತ್ರೆಗಳಲ್ಲಿ ಇನ್ನೂ ಅನೇಕ ದುಷ್ಪರಿಣಾಮಗಳಿವೆ. ಅನಿಯಮಿತ ಯೋನಿ ರಕ್ತಸ್ರಾವ, ಮೂಡ್ ಸ್ವಿಂಗ್, ಹೊಟ್ಟೆಯಲ್ಲಿ ಸಮಸ್ಯೆ, ವಾಕರಿಕೆ ಹೀಗೆ ಅನೇಕ ರೀತಿಯ ತೊಂದರೆಗಳು ಮುಟ್ಟಿನ ವಿಳಂಬ ಔಷಧಗಳಿಂದಾಗುತ್ತವೆ.