ಬೆಂಗಳೂರು: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಾರಂಬಿಸಿದೆ. ತರಕಾರಿ ಬೆಲೆ ಏರುಗತಿಯಲ್ಲಿ ಸಾಗಿದೆ. ಬಿರು ಬಿಸಿಲು ಮತ್ತು ರೋಗದ ಕಾರಣ ಬೆಳೆ ಕುಸಿತ ಕಂಡಿದ್ದು, ಇಳುವರಿ ಕಡಿಮೆಯಾಗಿ ತರಕಾರಿ ಬೆಲೆ ಹೆಚ್ಚಾಗತೊಡಗಿದೆ.
ಬಹುತೇಕ ಭಾಗದಲ್ಲಿ ಬಿಸಿಲು, ರೋಗದಿಂದ ತರಕಾರಿ ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರಿಂದ ಟೊಮೆಟೊ ಸೇರಿದಂತೆ ಕೆಲವು ತರಕಾರಿ ದರ ಹೆಚ್ಚಾಗತೊಡಗಿದೆ. ಕಳೆದ ವಾರ ಕೆಜಿಗೆ 20 ರೂಪಾಯಿ ಇದ್ದ ಟೊಮೇಟೊ ದರ 40 ರೂ.ಗೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಬಾಕ್ಸ್ ಗೆ 250 ರೂ.ಇದ್ದ ಟೊಮೆಟೊ ಈಗ 800 ರೂ.ವರೆಗೂ ತಲುಪಿದೆ.
ಈರುಳ್ಳಿ ದರ 100 ರೂಪಾಯಿಗೆ ಐದು ಕೆಜಿ, ಕ್ಯಾರೆಟ್ 40 ರೂ., ಬೀನ್ಸ್ 40 -60 ರೂ.ಗೆ ಏರಿಕೆಯಾಗಿದೆ. ಉಳಿದಂತೆ ಅನೇಕ ತರಕಾರಿ, ಸೊಪ್ಪು ಬೆಲೆಗಳಲ್ಲಿ ಬದಲಾವಣೆಯಾಗಿಲ್ಲ. ಆದರೆ, ಬೇಸಿಗೆ ಮುಂದುವರೆದಂತೆ ತರಕಾರಿ ಬೆಲೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.