
ಈ ವಿಷಯ ಇಲ್ಲೇಕೆ ಎಂದರೆ ಅಂಚೆ ಕಾಲದ ವಿಚಿತ್ರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಇಲ್ಲಿರುವ ಈ ಪತ್ರವನ್ನು 1916ರಲ್ಲಿ ಇಂಗ್ಲೆಂಡ್ನ ಬಾತ್ನಿಂದ ಪೋಸ್ಟ್ ಮಾಡಲಾಗಿದೆ. ಈ ಪತ್ರದ ಮೇಲೆ ಕಿಂಗ್ ಜಾರ್ಜ್-5 ಸ್ಟ್ಯಾಂಪ್ ಇದೆ.
ಆದರೆ ಈ ಪತ್ರ ತಲುಪಬೇಕಾದ ವಿಳಾಸವನ್ನು ತಲುಪಿದ್ದು 100 ವರ್ಷಗಳ ಬಳಿಕ. ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪತ್ರವನ್ನು ರವಾನಿಸಲಾಗಿದೆ. ಆ ಸಂದರ್ಭದಲ್ಲಿ ಕಿಂಗ್ ಜಾರ್ಜ್-5 ಆಡಳಿತವಿತ್ತು. ಆದರೆ ಇದು ತಲುಪಿದ್ದು ಮಾತ್ರ ನೂರು ವರ್ಷಗಳ ನಂತರ ಎನ್ನುವುದು ಅಚ್ಚರಿ ಮತ್ತು ವಿಸ್ಮಯ.
2021 ರಲ್ಲಿ ದಕ್ಷಿಣ ಲಂಡನ್ನಲ್ಲಿರುವ ಗ್ಲೆನ್ ಮತ್ತು ಆತನ ಗೆಳತಿ ವಾಸವಾಗಿದ್ದ ಫ್ಲ್ಯಾಟ್ಗೆ ಇದು ತಲುಪಿದೆ. ಗ್ಲೆನ್, ಈ ಪತ್ರವನ್ನು ಸ್ಥಳೀಯ ಐತಿಹಾಸಿಕ ಸಂಶೋಧನಾ ಕೇಂದ್ರಕ್ಕೆ ತಲುಪಿಸಿದ್ದಾರೆ. ಸಂಶೋಧನೆಯ ಮೂಲಕ ತಿಳಿದು ಬಂದಿರುವುದೇನೆಂದರೆ, ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಕಟೀ ಮಾರ್ಶ್ ಎನ್ನುವವರು ಬಾತ್ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ಕ್ರಿಸ್ಟಾಬೆಲ್ ಮೆನ್ನೆಲ್ ಎನ್ನುವವರಿಗೆ ಬರೆದ ಪತ್ರವು ಇದಾಗಿದೆ. ಇವರಿಬ್ಬರೂ ಸ್ನೇಹಿತೆಯರಾಗಿದ್ದರು ಎನ್ನಲಾಗಿದೆ.

