ದೇವಸ್ಥಾನದ ಹಿಂಬದಿಯಲ್ಲಿರುವ ತುಂಗಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ, ಸಹಸ್ರ ಲಿಂಗಗಳಿಗೆ ಪೂಜೆ ಸಲ್ಲಿಸಿದರು. ಇಲ್ಲಿರುವ ಬೃಹದಾಕಾರದ ಶಿವಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಸಂಘಟನೆಗಳು ನಿರಂತರವಾಗಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟವು. ದೇವರ ದರ್ಶನ ಮಾಡಿ ಬರುವ ಭಕ್ತರಿಗೆ ಪ್ರಸಾದ, ಪಾನಕ, ಭಕ್ತಾದಿಗಳಿಗೆ ನೀರು, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಸ್ಥಾನದ ಎದುರು ಭಕ್ತರ ಸಂದಣಿ ಹೆಚ್ಚಾದ ಕಾರಣ ಪೊಲೀಸರು ತೀರ್ಥಹಳ್ಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಿದ್ದರು.
ಅಲ್ಲದೆ, ಬಿ.ಹೆಚ್. ರಸ್ತೆಯ ಮೈಲಾರೇಶ್ವರ, ಕೋಟೆ ರಸ್ತೆಯ ಭೀಮೇಶ್ವರ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯ, ಹೊಳೆಹೊನ್ನೂರು ರಸ್ತೆಯ ಅರಕೇಶ್ವರ ಸ್ವಾಮಿ ದೇವಾಲಯ, ಗಾಂಧಿಬಜಾರ್‌ನ ಬಸವೇಶ್ವರಸ್ವಾಮಿ ದೇವಸ್ಥಾನ, ವಿನೋಬನಗರದ ಶಿವಾಲಯ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದು, ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು.
ಬಿ.ಬಿ. ರಸ್ತೆಯ ಶ್ರೀ ಭವಾನಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳನ್ನು ಏರ್ಪಡಿಸಲಾಗಿತ್ತು. ಬಸವನಗುಡಿ ಶ್ರೀ ಶೈಲಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮೊದಲಾದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ನಗರದ ದೇವಾಲಯಗಳಲ್ಲೂ ದೇವರ ದರ್ಶನಕ್ಕೆ ಹಾಗೂ ವಿಶೇಷ ಪೂಜೆ ಸಲ್ಲಿಸಲು ಭಕ್ತಾದಿಗಳು ದೇವಾಲಯಗಳ ಮುಂಭಾಗ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ, ಸಂಗೀತ, ಹರಿಕಥೆ, ಭಜನೆ, ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಖರೀದಿ ಭರಾಟೆ: ಶಿವರಾತ್ರಿ ಅಂಗವಾಗಿ ನಗರದ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಮುಖ್ಯವಾಗಿ ಹೂವು, ಹಣ್ಣುಗಳನ್ನು ಕೊಳ್ಳಲು ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಬನಾಸ್ಪತ್ರೆ ಹಾಗೂ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು.