ದೇಶದ ವಿವಿಧ ಕಡೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣವಾಗಿ ಮುಂದುವರಿದಿದ್ದು, ದೇವಸ್ಥಾನ ಪ್ರವೇಶಕ್ಕೆ ತಡೆ ಹಾಕುವುದು, ಕುಡಿಯಲು ನೀರು ಕೊಡಲು ಸತಾಯಿಸುವುದು, ಹೋಟೆಲ್ಗಳಲ್ಲಿ ಅವಕಾಶ ಕೊಡದೇ ಇರುವ ಉದಾಹರಣೆ ಬೆಳಕಿಗೆ ಬರುತ್ತಲೇ ಇವೆ.
ಇದೀಗ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ 16 ವರ್ಷದ ದಲಿತ ವಿದ್ಯಾರ್ಥಿಗೆ ಥಳಿಸಿದ ಆರೋಪದ ಮೇಲೆ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
11 ನೇ ತರಗತಿಯ ವಿದ್ಯಾರ್ಥಿಗೆ ಪ್ರಾಂಶುಪಾಲರು ಥಳಿಸಿದ ಕಾರಣ ಆತನ ಮುಖ ಮತ್ತು ಕೈಗಳಿಗೆ ಗಾಯಗಳಾಗಿವೆ. ಥಳಿಸಿದ ಆರೋಪಿಯನ್ನು ಯೋಗೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿಯು ಕಾಲೇಜಿನ ವಿದಾಯ ಕೂಟಕ್ಕೆ ಹಾಜರಾಗಿದ್ದಾಗ ತನ್ನ ಎದುರಿನ ಬೆಂಚ್ನಲ್ಲಿ ಇರಿಸಲಾಗಿದ್ದ ಬಾಟಲಿಯಲ್ಲಿದ್ದ ನೀರು ಕುಡಿದಿದ್ದು ಪ್ರಾಂಶುಪಾಲರನ್ನು ಕೆರಳಿಸಿತು.
ವಿದ್ಯಾರ್ಥಿಯ ದೂರಿನ ಮೇರೆಗೆ ಆರೋಪಿ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ತಿಳಿಸಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.