ಗ್ರಾಚ್ಯುಟಿ ವಿತರಣೆ, ಶಿಕ್ಷಕರೆಂದು ಪರಿಗಣಿಸುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಳೆದ 10 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಅಂಗನವಾಡಿ ನೌಕರರು ಬುಧವಾರದಂದು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಗ್ರಾಚ್ಯುಟಿ ಕಾಯ್ದೆ 1972ರ ಅನ್ವಯ ನೀಡಲು ಮುಖ್ಯಮಂತ್ರಿ ಅವರ ಅನುಮೋದನೆ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದ್ದು, ಜೊತೆಗೆ ಶಾಲಾಪೂರ್ವ ಶಿಕ್ಷಣಕ್ಕಾಗಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ದಿಷ್ಟ ಸಮಯ ಮೀಸಲಿರಿಸಿ ಲಿಖಿತ ಆದೇಶ ನೀಡಲಾಗಿದೆ.
ಅಲ್ಲದೆ ಕಟ್ಟಡ ವೆಚ್ಚವನ್ನು 12 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲು ಒಪ್ಪಿಗೆ ನೀಡಲಾಗಿದ್ದು, ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು ಸಹ ಸಮ್ಮತಿಸಲಾಗಿದೆ. ಜೊತೆಗೆ ಇನ್ನೂ ಕೆಲ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ನೀಡಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.