ಶಸ್ತ್ರಚಿಕಿತ್ಸೆ ವೇಳೆ ಪತ್ನಿಯ ಎರಡೂ ಕಿಡ್ನಿಗಳು ಕಳುವಾದ ಬಳಿಕ ಆಕೆಯನ್ನ ಪತಿ ಮೂರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಬಿಟ್ಟುಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಸುನೀತಾ ಎಂದು ಗುರುತಿಸಲಾದ ಮಹಿಳೆ ಈಗ ತನ್ನ ಮೂವರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಅವರಿಗೆ ಯಾವುದೇ ಆದಾಯವಿಲ್ಲದೇ ಆಸ್ಪತ್ರೆಯ ಖರ್ಚು ಭರಿಸಲಾಗದೇ ಸಂಕಷ್ಟದಲ್ಲಿದ್ದಾರೆ.
ಸುನೀತಾ ಗರ್ಭಾಶಯದ ಸೋಂಕಿನಿಂದಾಗಿ ಮುಜಾಫರ್‌ಪುರದ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರ ಮೂತ್ರಪಿಂಡಗಳನ್ನು ಕದ್ದಿದ್ದಾರೆ.
ದಿನಗೂಲಿ ಕೆಲಸ ಮಾಡುತ್ತಿದ್ದ ಸುನೀತಾ ತನ್ನ ಮೂವರು ಮಕ್ಕಳನ್ನು ಸಾಕುತ್ತಿದ್ದರು. ಈಗ ಕೆಲಸಕ್ಕೆ ಹೋಗಲಾಗದೇ ಆಸ್ಪತ್ರೆಗೆ ದಾಖಲಾಗಿರುವ ಆಕೆ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ. ಕೆಲ ದಿನಗಳ ಹಿಂದಿನವರೆಗೂ ಸುನೀತಾ ಅವರ ಪತಿ ಅಕ್ಲು ರಾಮ್ ಆಕೆಯ ಜೊತೆಗಿದ್ದರು. ಆತನೂ ಆಕೆಗೆ ಕಿಡ್ನಿ ನೀಡಲು ಸಿದ್ಧನಾಗಿದ್ದ. ಆದರೆ ಆತನ ಕಿಡ್ನಿ ಹೊಂದಿಕೆಯಾಗಲಿಲ್ಲ. ಸುನೀತಾ ಅವರೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ ಪತಿ ಇದೀಗ ಮೂವರು ಮಕ್ಕಳನ್ನು ಆಕೆಯ ಬಳಿ ಬಿಟ್ಟು ಓಡಿ ಹೋಗಿದ್ದಾನೆ.
ಹೊರಡುವಾಗ ಈಗ ನಿನ್ನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ನಾನು ಆರೋಗ್ಯವಾಗಿದ್ದಾಗ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದೆ. ಈಗ ಅನಾರೋಗ್ಯ ಇರುವುದರಿಂದ ಗಂಡ ನನ್ನನ್ನು ಬಿಟ್ಟು ಹೋಗಿದ್ದು, ಅವರು ಮತ್ತೊಂದು ಮದುವೆಯಾಗಲಿದ್ದಾರೆ ಎಂಬ ಆತಂಕದಲ್ಲಿ ಸುನೀತಾ ಇದ್ದಾರೆ. ಸದ್ಯ ಅವರನ್ನು ಆಕೆಯ ತಾಯಿ ನೋಡಿಕೊಳ್ಳುತ್ತಿದ್ದಾರೆ. ಸುನೀತಾಗೆ ಇತರರು ಕಿಡ್ನಿ ನೀಡಲು ಮುಂದಾಗಿದ್ರೂ ಅವರ ಮೂತ್ರಪಿಂಡ ಮ್ಯಾಚ್ ಆಗ್ತಿಲ್ಲ.
ಸೆಪ್ಟೆಂಬರ್ 3 ರಂದು ಮುಜಾಫರ್‌ಪುರದ ಬರಿಯಾರ್‌ಪುರ ಚೌಕ್ ಬಳಿಯ ಶುಭಕಾಂತ್ ಕ್ಲಿನಿಕ್‌ನಲ್ಲಿ ಗರ್ಭಾಶಯದ ಸೋಂಕಿನ ಬಗ್ಗೆ ತೋರಿಸಲು ಹೋದಾಗ ಸುನೀತಾ ಅವರ ಕಿಡ್ನಿಗಳನ್ನು ವೈದ್ಯರಂತೆ ವರ್ತಿಸಿದ್ದ ವ್ಯಕ್ತಿ ಕದ್ದಿದ್ದಾನೆ. ಮಹಿಳೆಯ ಸ್ಥಿತಿ ಹದಗೆಟ್ಟಾಗ ವೈದ್ಯರು ಮತ್ತು ಕ್ಲಿನಿಕ್ ನಿರ್ದೇಶಕ ಪವನ್, ಸುನೀತಾಳನ್ನು ಪಾಟ್ನಾದ ನರ್ಸಿಂಗ್ ಹೋಂಗೆ ದಾಖಲಿಸಿ ಪರಾರಿಯಾಗಿದ್ದರು. ಪೊಲೀಸರು ಪವನ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.