ಕೆಲವು ಕಾರಣದಿಂದಾಗಿ ಜನರು ಮನೆಯಲ್ಲಿಯಿಂದಲೇ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಇರುವಂತೆ ಸೌಲಭ್ಯವಿರುವುದಿಲ್ಲ. ಕೆಲವರು ಕಾಲಿನ ಮೇಲೆ ಲ್ಯಾಪ್ ಟಾಪ್ ಇಟ್ಟು ಕೆಲಸ ಮಾಡ್ತಾರೆ. ಮತ್ತೆ ಕೆಲವರು ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡ್ತಾರೆ. ಹಾಸಿಗೆ ಮೇಲೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವುದ್ರಿಂದ ಸಾಕಷ್ಟು ಸಮಸ್ಯೆಯಿದೆ.
ಹಾಸಿಗೆ ಮೇಲೆ ಕುಳಿತುಕೊಳ್ಳುವ ಭಂಗಿ ಸ್ಲಿಪ್ ಡಿಸ್ಕ್ ಗೆ ಕಾರಣವಾಗಬಹುದು. ಹಾಸಿಗೆ ಮೇಲೆ ಬೆನ್ನು ಬಗ್ಗಿಸಿ ಕುಳಿತುಕೊಳ್ಳುವುದ್ರಿಂದ ಬೆನ್ನು ನೋವು ಕಾಡಲು ಶುರುವಾಗುತ್ತದೆ. ಬೆನ್ನು ಮೂಳೆಯಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಮಲಗಲು, ನಡೆಯಲು ತೊಂದರೆಯಾಗಬಹುದು. ಪಾದಗಳ ನೋವಿಗೂ ಇದು ಕಾರಣವಾಗುತ್ತದೆ.
ಹಾಸಿಗೆ ಮೇಲೆ ಕುಳಿತು ಕೆಲಸ ಮಾಡುವುದ್ರಿಂದ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಮೆದುಳು ಹಾಸಿಗೆ ನಿದ್ರೆ ಮಾಡುವ ಸ್ಥಳ ಎಂದುಕೊಂಡಿರುತ್ತದೆ. ಅಲ್ಲಿಯೇ ಕೆಲಸ ಮಾಡುವುದ್ರಿಂದ ಬದಲಾವಣೆಗೆ ಹೊಂದಿಕೊಳ್ಳುವುದು ಮೆದುಳಿಗೆ ಕಷ್ಟವಾಗುತ್ತದೆ.
ಹಾಸಿಗೆ ಮೇಲೆ ಕುಳಿತು ಕೆಲಸ ಮಾಡುವುದ್ರಿಂದ ಕುತ್ತಿಗೆ ಹಾಗೂ ಭುಜ ನೋವು ಕಾಡುತ್ತದೆ. ಸ್ನಾಯುಗಳಿಗೆ ಯಾವುದೇ ವಿಶ್ರಾಂತಿ ಸಿಗುವುದಿಲ್ಲ. ಅವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಯಾವಾಗಲೂ ನೇರವಾಗಿ ಕುಳಿತು ಕೆಲಸ ಮಾಡಬೇಕು. ಲ್ಯಾಪ್ ಟಾಪ್ ಎತ್ತರದಲ್ಲಿರಬೇಕು. ಕತ್ತು ಹಾಗೂ ಬೆನ್ನನ್ನು ತುಂಬಾ ಬಗ್ಗಿಸಿ ಕೆಲಸ ಮಾಡುವಂತಿರಬಾರದು.