ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದು, ರಾಜ್ಯದಾದ್ಯಂತ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ. ಜೊತೆಗೆ ನಾಯಕರ ಆರೋಪ – ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, ಈ ಹೇಳಿಕೆಗಳು ಕೆಲವೊಮ್ಮೆ ಅತಿರೇಕಕ್ಕೂ ಹೋಗಿದ್ದುಂಟು. ಇದರ ಮಧ್ಯೆ ಬಿಜೆಪಿ ಕಾರ್ಯಕರ್ತರೊಬ್ಬರ ಹೇಳಿಕೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಹೌದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಾಯ ನಾಗರಾಳ ಇಂತಹದೊಂದು ಹೇಳಿಕೆ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ ಅವರಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
ಶುಕ್ರವಾರದಂದು ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅಭಿವೃದ್ಧಿಯಾಗಲಿದೆ. ಹೀಗಾಗಿ ಸಿದ್ದರಾಮಯ್ಯನವರು ಇಲ್ಲಿಂದ ಸ್ಪರ್ಧಿಸುವುದಾದರೆ 10,000 ಜನರನ್ನು ಸೇರಿಸಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಜೊತೆಗೆ ಅವರನ್ನು 50 ರಿಂದ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ತಿಳಿಸಿದ್ದಾರೆ.