ಚಿಕ್ಕಮಗಳೂರು: ದತ್ತಪೀಠ ಹಾಗೂ ದತ್ತಮಾಲೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷಮೆ ಯಾಚಿಸಿದ್ದಾರೆ. ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಟಿ.ಡಿ.ರಾಜೇಗೌಡ, ಹಳ್ಳಿಗಳಲ್ಲಿ ರೂಢಿಯಿರುವ ಶಬ್ದಗಳನ್ನು ಬಳಸಿದ್ದೆ. ಆ ಶಬ್ದ ಬಳಕೆ ಯಾರ ಸಂಸ್ಕೃತಿಯೂ ಆಗಬಾರದು. ತಾನು ಆ ರೀತಿ ಶಬ್ದ ಬಳಸಿದ್ದು ತಪ್ಪು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಆಕ್ರೋಶಭರಿತನಾಗಿ ಮಾತನಾಡಿದ್ದೆ. ಅಲ್ಲದೇ ದತ್ತಮಾಲೆ ಹಾಕಿಲ್ಲ ಎಂದು ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ವಿಷಯವಾಗಿ ಬುದ್ಧಿ ಹೇಳುವ ಕೆಲಸ ಮಾಡಿದ್ದೆ ಎಂದು ಹೇಳಿದ್ದಾರೆ.
ದತ್ತಮಾಲೆ ಹಾಗೂ ದತ್ತಪೀಠದ ಬಗ್ಗೆ ಶಾಸಕ ರಾಜೇಗೌಡ ನೀಡಿದ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂಪರ ಸಂಘಟನೆಗಳು 24 ಗಂಟೆಯೊಳಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಶಾಸಕರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.