ಬೆಂಗಳೂರು: ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ನೀಡಲು ಇಲ್ಲ. ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂಡು ಯಾವುದೇ ಆದಾಯವಿಲ್ಲದಂತಾಗಿದೆ. ಹೀಗಾಗಿ ಜೀವನ ನಿರ್ವಹಣೆಗೆ ಪತ್ನಿಯಿಂದ ಜೀವನಾಂಶ ಕೊಡಿಸಬೇಕೆಂದು ಬೆಂಗಳೂರಿನ ಕನಕಪುರ ರಸ್ತೆಯ ವ್ಯಕ್ತಿಯೊಬ್ಬರು ಮಾಡಿದ ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ತಿರಸ್ಕರಿಸಿದೆ.
ಪ್ರಕರಣದಲ್ಲಿ ಪತ್ನಿಯಿಂದ ಜೀವನಾಂಶ ಪಡೆದುಕೊಂಡು ಆರಾಮಾಗಿ ಜೀವನ ನಡೆಸಲು ಪತಿ ನಿರ್ಧರಿಸಿದ್ದನೆಂಬುದು ನಿಸ್ಸಂದೇಹವಾಗಿ ತೀರ್ಮಾನಿಸಬಹುದಾಗಿದೆ. ಹಾಗಾಗಿ, ಪತ್ನಿಯಿಂದ ಜೀವನಾಂಶ ಕೋರಿದ ಪತಿಯ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೈಕೋರ್ಟ್ ಹೇಳಿದೆ. ದುಡಿಯಲು ಸಾಮರ್ಥ್ಯ ಹೊಂದಿರುವ ಪತಿಗೆ ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನಗೆ, ಪತ್ನಿಗೆ, ಮಗುವಿನ ಜೀವನ ನಿರ್ವಹಣೆ ಮಾಡುವುದು ದುಡಿಯುವ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ. ಉದ್ಯೋಗ ಮತ್ತು ಆದಾಯವಿಲ್ಲದ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಹಾಗಾಗಿ ಪತ್ನಿಗೆ ಜೀವನಾಂಶ ನೀಡಬೇಕೆಂಬ ಪತಿಯ ವಾದ ಒಪ್ಪಲು ಸಾಧ್ಯವಿಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಜೀವನಾಂಶ ಪಡೆಯಲು ಯಾವುದೇ ಲಿಂಗ ಭೇದವಿಲ್ಲವೆಂಬ ಕಾರಣಕ್ಕೆ ದುಡಿಯಲು ಸಾಮರ್ಥ್ಯವಿರುವ ಪತಿ ಪತ್ನಿಯಿಂದ ಜೀವನಾಂಶ ನೀಡಲು ಆದೇಶಿಸಿದರೆ ಸೋಮಾರಿತನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2017ರ ಫೆಬ್ರವರಿ 6ರಂದು ದಂಪತಿ ಮದುವೆಯಾಗಿದ್ದು, ಈಗ ದೂರಾಗಿದ್ದಾರೆ. ಪತ್ನಿ ತವರು ಮನೆ ಸೇರಿದ್ದು, ಪತಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೈವಾಹಿಕ ಸಂಬಂಧ ಪುನರ್ ಸ್ಥಾಪನೆಗೆ ಪತ್ನಿ ಮನವಿ ಮಾಡಿದ್ದಾರೆ.
ಪತಿಯಿಂದ ಮಧ್ಯಂತರ ಜೀವನಾಂಶವಾಗಿ ಮಾಸಿಕ 25,000 ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ಒಂದು ಲಕ್ಷ ರೂಪಾಯಿ ಕೊಡಿಸುವಂತೆ ಪತ್ನಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಆಕ್ಷೇಪಿಸಿದ ಪತಿ ತನ್ನ ಜೀವನ ನಡೆಸಲು ಯಾವುದೇ ಆದಾಯವಿಲ್ಲ. ತನ್ನ ಮತ್ತು ಪೋಷಕರ ಜೀವನ ನಿರ್ವಹಣೆಗೆ ಪತ್ನಿಯಿಂದಲೇ ಜೀವನಾಂಶ ಕೊಡಿಸಬೇಕೆಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು ಗ್ರಾಮಾಂತರ ಕೌಟುಂಬಿಕ ನ್ಯಾಯಾಲಯ ಪತಿಯ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದು, 2021ರ ಡಿಸೆಂಬರ್ ನಿಂದ ವಿಚ್ಛೇದನ ಅರ್ಜಿ ಇತ್ಯರ್ಥವಾಗುವವರೆಗೆ ಪತ್ನಿಗೆ ಮಾಸಿಕ 10,000 ರೂ. ಜೀವನಾಂಶ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 25,000 ರೂ. ಪಾವತಿಸುವಂತೆ 2022ರ ಅಕ್ಟೋಬರ್ 31 ರಂದು ಆದೇಶ ನೀಡಿತ್ತು. ಪತ್ನಿಯಿಂದ ಜೀವನಾಂಶ ಕೋರಿದ್ದಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ದುಡಿಯುವ ಶಕ್ತಿ ಇರುವ ಪತಿಗೆ ಜೀವನಾಂಶ ಏಕೆ ಎಂದು ಪ್ರಶ್ನಿಸಿದೆ.