ಕೋವಿಡ್ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ ಇಂದಿಗೂ ಮುಂದುವರೆದಿದೆ. ಹಲವಾರು ಕಂಪೆನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದೀಗ ಜಗತ್ತಿನ ನಂಬರ್ ಒನ್ ಕಂಪೆನಿ ಮೈಕ್ರೋಸಾಫ್ಟ್ನಲ್ಲಿ ಇಲ್ಲಿಯವರೆಗೆ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಲವರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪ್ರಶಾಂತ ಕಮಾನಿ ಎನ್ನುವವರ ಪೋಸ್ಟ್ ವೈರಲ್ ಆಗುತ್ತಿದೆ. 21 ವರ್ಷಗಳ ಕಾಲ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸ ಮಾಡಿರುವ ಇವರನ್ನು ವಜಾಗೊಳಿಸಲಾಗಿದ್ದು, ಅದನ್ನು ಅವರು ಬರೆದುಕೊಂಡಿದ್ದಾರೆ. ಈ ಕಂಪೆನಿ ವೃತ್ತಿ ಸಂಬಂಧದ ಬೆಳವಣಿಗೆಗೆ ಮಾತ್ರವಲ್ಲ, ಸಹೋದ್ಯೋಗಿಗಳೊಂದಿಗೆ ವೈಯಕ್ತಿಕ ಸಂಬಂಧ ಬೆಸೆಯಲೂ ಕಾರಣವಾಗಿದೆ. ಈ ಕಂಪೆನಿಯಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನನ್ನಲ್ಲಿ ಕೃತಜ್ಞತಾ ಭಾವ ಮೂಡಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಕಾಲೇಜು ಶಿಕ್ಷಣ ಮುಗಿಸಿ ಸೇರಿದ ಮೊದಲ ಕೆಲಸ ಇದಾಗಿತ್ತು. ಮೊದಲ ಕೆಲಸವೆಂದ ಮೇಲೆ ಆತಂಕ, ಉತ್ಸಾಹ ಎರಡೂ ಇದ್ದದ್ದೇ. ಆದರೆ ಈ ಕಂಪೆನಿಯ ಅನೇಕ ಪ್ರತಿಭಾವಂತ, ಸ್ಮಾರ್ಟ್ ಜನರೊಂದಿಗಿನ ಒಡನಾಟ ನನ್ನನ್ನು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡಿತು. ಈ ಪ್ರಯಾಣದಲ್ಲಿ ಅನೇಕರೊಂದಿಗೆ ವೈಯಕ್ತಿಕ ಒಡನಾಟ ಬೆಳೆಯಿತು. ಒಳ್ಳೆಯ ಮತ್ತು ಸವಾಲಿನ ಸಂದರ್ಭಗಳು ಬಂದಾಗೆಲ್ಲ ಅವರು ಜೊತೆಯಾದರು. ಒಂದು ದೊಡ್ಡ ಕುಟುಂಬವೇ ನಿರ್ಮಾಣವಾಯಿತು. ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದು, ಅವರಿಗೆ ಹಲವರು ಶುಭ ಹಾರೈಸಿದ್ದಾರೆ.