ಪ್ರವಾಸಿಗರಿಗೆ ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯ ಪ್ರದೇಶ ಸುತ್ತಾಡಿಸಿದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದೇಶಿಗರು ಸೇರಿದಂತೆ ಗುವಾಹಟಿ ನಿವಾಸಿಯೊಬ್ಬರನ್ನು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಅರೆ ಕಾಲೋನಿ ಅರಣ್ಯ ಪ್ರದೇಶದಲ್ಲಿ ಸುತ್ತಾಡಿಸಿದ್ದ ಇಬ್ಬರನ್ನು ಗುವಾಹಟಿ ಮೂಲದ ಉದ್ಯಮಿ ಹಿಟ್ ಫರುಕುರ್ ಫೈಜ್ ಉರ್ ರೆಹ್ಮಾನ್ (28) ಅವರ ದೂರಿನ ಮೇರೆಗೆ ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಆರೋಪಿಗಳನ್ನು ರೋಹಿತ್ ಕಸಾರೆ ಮತ್ತು ಡೆಂಜಿಲ್ ಫೆರ್ನಾಂಡಿಸ್ ಅಕಾ ಡೆಂಜೊ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗುವಾಹಟಿಯಲ್ಲಿ ವಾಸಿಸುವ ದೂರುದಾರರಾದ ಫೈಜ್ ಉರ್ ರೆಹ್ಮಾನ್ ಮೊದಲ ಬಾರಿಗೆ ಮುಂಬೈಗೆ ಬಂದಿದ್ದು ಅವರು ಫಿಲ್ಮ್ ಸಿಟಿ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದ್ದರು. ಫಿಲ್ಮ್ ಸಿಟಿ ನೋಡಲು ಬಂದಿದ್ದ ಅವರನ್ನು ಫಿಲಂ ಸಿಟಿಯ ಗೇಟ್ ಬಳಿ ನಿಂತಿದ್ದ ಆರೋಪಿಗಳಾದ ರೋಹಿತ್ ಮತ್ತು ಡೆಂಜಿಲ್ ಇಬ್ಬರೂ ಫೈಜ್ ಉರ್ ರೆಹ್ಮಾನ್ ಅವರನ್ನು ಮಾರ್ಗದರ್ಶಿ ಪ್ರವಾಸ ( ಗೈಡ್ ಟೂರ್ ) ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಟಿವಿ ಶೋಗಳು ತಮ್ಮ ಶೂಟಿಂಗ್ ಸ್ಟುಡಿಯೋಗಳನ್ನು ಹೊಂದಿರುವ ಫಿಲ್ಮ್ ಸಿಟಿಯನ್ನು ತೋರಿಸಲು 1500 ರೂ. ಕೇಳಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡಿದ್ದಾರೆ.
ಆದರೆ ಇಬ್ಬರು ವಿದೇಶಿಗರು ಸೇರಿದಂತೆ ಫೈಜ್ ಉರ್ ರೆಹ್ಮಾನ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡ ಅವರು ಆರೆ ಕಾಲೋನಿ ಅರಣ್ಯ ಪ್ರದೇಶದಲ್ಲಿ ಪ್ರವಾಸ ಮಾಡಿ ಫಿಲಂ ಸಿಟಿ ತೋರಿಸುವಂತೆ ನಟಿಸಿದ್ದಾರೆ. ನಿಜವಾದ ಫಿಲ್ಮ್ ಸಿಟಿಯನ್ನು ತೋರಿಸಲು ಫೈಜ್ ಉರ್ ರೆಹ್ಮಾನ್ ಆರೋಪಿಗಳನ್ನು ಕೇಳಿದಾಗ, ಆರೋಪಿಗಳು ಪ್ರತಿ ವ್ಯಕ್ತಿಗೆ 1500 ರೂ. ಹೆಚ್ಚುವರಿ ಶುಲ್ಕವನ್ನು ಕೇಳಿದ್ದಾರೆ. ವಿದೇಶಿ ಪ್ರವಾಸಿಗರು ಮತ್ತು ಗುವಾಹಟಿ ನಿವಾಸಿ ಹಣ ನೀಡಲು ನಿರಾಕರಿಸಿದ ನಂತರ, ಆರೋಪಿಗಳು ಅವರನ್ನು ಮತ್ತೆ ಫಿಲ್ಮ್ ಸಿಟಿ ಗೇಟ್‌ಗೆ ಕರೆದೊಯ್ದು ಪರಾರಿಯಾಗಿದ್ದಾರೆ.
ನಂತರ ಫೈಜ್ ಉರ್ ರೆಹ್ಮಾನ್ ಮತ್ತು ಇಬ್ಬರು ವಿದೇಶಿಗರು ದಿಂಡೋಶಿ ಪೊಲೀಸ್ ಠಾಣೆಗೆ ಧಾವಿಸಿ ಅವರ ವಿರುದ್ಧ ವಂಚನೆ ದೂರು ದಾಖಲಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.