ಸಡಗರ, ಸಂಭ್ರಮದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 15 ರ ಭಾನುವಾರದಂದು ಆಚರಿಸಲಾಗುತ್ತದೆ. ಸುಗ್ಗಿಯ ಹಬ್ಬ ಎಂದೇ ಕರೆಯಲ್ಪಡುವ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ರೈತರು ಬೆಳೆದ ಪೈರನ್ನು ಸಂಭ್ರಮದಿಂದ ರಾಶಿ ಮಾಡಿ ‘ಸುಗ್ಗಿ ಹಬ್ಬ’ವಾಗಿ ಇದನ್ನು ಆಚರಿಸುತ್ತಾರೆ.
ಸಂಕ್ರಾಂತಿಗೆ ಸುಗ್ಗಿ ಹಬ್ಬ, ಪೊಂಗಲ್ ಎಂದೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಹಾಲು ಮಡಕೆಯಿಂದ ಉಕ್ಕಿ ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
ಇನ್ನು ಸಂಕ್ರಾಂತಿಗೆ ಎಳ್ಳು, ಬೆಲ್ಲ, ಕಬ್ಬು ಸಾಮಾನ್ಯ. ಇವುಗಳನ್ನು ಹಂಚುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ರೂಢಿಯಲ್ಲಿದೆ. ರೈತರಿಗೆ ಸುಗ್ಗಿ ಕಾಲವಾಗಿರುವುದರಿಂದ ಕೊಂಚ ಬಿಡುವು ಸಿಗುತ್ತದೆ. ಹಾಗಾಗಿ ಕೆಲವು ಪ್ರದೇಶಗಳಲ್ಲಿ ಕಿಚ್ಚು ಹಾಯಿಸುವ ಪದ್ಧತಿ ರೂಢಿಯಲ್ಲಿದೆ. ಎತ್ತುಗಳು ಬೆಂಕಿಯಲ್ಲಿ ಹಾಯುವುದನ್ನು ಕಿಚ್ಚು ಹಾಯಿಸುವುದು ಎಂದು ಕರೆಯುತ್ತಾರೆ.
ಸಂಕ್ರಾಂತಿ ವಿಶೇಷವಾದ ಹಬ್ಬ. ಇದು ವರ್ಷದ ಮೊದಲ ಹಬ್ಬವೂ ಆಗಿದೆ. ಸೂರ್ಯ ಪಥ ಬದಲಿಸುತ್ತಾನೆನ್ನಲಾಗಿದ್ದು, ಅದೇ ರೀತಿಯಲ್ಲಿ ಸಾಗಬೇಕಾದ ದಾರಿ ಸರಿ ಇದೆಯೇ ಎಂಬುದನ್ನು ನೋಡಿಕೊಂಡು ಪಥ ಬದಲಿಸಿಕೊಳ್ಳಲು ಸೂಚನೆ ನೀಡುವ ಹಬ್ಬ ಕೂಡ ಸಂಕ್ರಾಂತಿ ಎಂದು ಹೇಳಲಾಗುತ್ತದೆ. ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಉತ್ಸವಕ್ಕೆ ಅಸಂಖ್ಯಾತ ಜನ ಸೇರುತ್ತಾರೆ. ಬಹುತೇಕ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ಕೂಡ ನಡೆಯುತ್ತದೆ.