ಇಂದೋರ್(ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್(IMC) ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಂದು ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.
ನಾಗರಿಕ ಸಂಸ್ಥೆಯು ನಗರದ ಐದು ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ಗಳಿಗಾಗಿ ಎಟಿಎಂ ತರಹದ ಯಂತ್ರಗಳನ್ನು ಸ್ಥಾಪಿಸಿದೆ. ಇದರಲ್ಲಿ ಒಬ್ಬರು ಬ್ಯಾಗ್ ಪಡೆಯಲು 10 ರೂಪಾಯಿ ನಾಣ್ಯ ಅಥವಾ 10 ರೂಪಾಯಿ ನೋಟನ್ನು ಠೇವಣಿ ಮಾಡಬಹುದು.
ಐಎಂಸಿ ಆಯುಕ್ತೆ ಪ್ರತಿಭಾ ಪಾಲ್ ಮಾತನಾಡಿ, ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಬಟ್ಟೆ ಚೀಲದ ಯಂತ್ರಗಳನ್ನು ಅಳವಡಿಸಲಾಗಿದೆ. ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಜನರು ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ತಡೆಯಲು ನಗರದ ಮಾರುಕಟ್ಟೆಗಳಲ್ಲಿ ಐದು ಯಂತ್ರಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇಂತಹ ಹೆಚ್ಚಿನ ಯಂತ್ರಗಳನ್ನು ಅಳವಡಿಸಲಾಗುವುದು. ಇಂದೋರ್ ಮಧ್ಯಪ್ರದೇಶದಲ್ಲಿ ಇಂತಹ ಯಂತ್ರವನ್ನು ಸ್ಥಾಪಿಸಿದ ಮೊದಲ ನಗರವಾಗಿದೆ ಎಂದರು.
ನಗರದ ಪ್ರಸಿದ್ಧ ಫುಡ್ ಸ್ಟ್ರೀಟ್ 56 ಶಾಪ್ ಅಸೋಸಿಯೇಷನ್ ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ಈ ಪ್ರಯೋಗ ಬಹಳ ಉಪಯುಕ್ತವಾಗಿದ್ದು, ಶಾಪ್ ಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಿದ್ದೇವೆ, ಬೇರೆಡೆಯಿಂದ ಬರುವವರಿಗೆ ಇಂತಹ ಯಂತ್ರಗಳ ಬಗ್ಗೆ ಅರಿವಿರಲಿಲ್ಲ. ಇಂತಹ ಯಂತ್ರಗಳನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅಳವಡಿಸಬೇಕು ಎಂದು ಹೇಳಿದ್ದಾರೆ.
ಅಳವಡಿಸಿರುವ ಯಂತ್ರವೊಂದರಿಂದ ಬಟ್ಟೆ ಚೀಲ ಖರೀದಿಸಲು ಬಂದಿದ್ದ ಸಂಜಯ್ ಕರೋಯ್ಯಾ ಮಾತನಾಡಿ, ನಗರವನ್ನು ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಲು ಇಂತಹ ಇನ್ನಷ್ಟು ವಿನೂತನ ಸಾಧನಗಳನ್ನು ಅಳವಡಿಸಬೇಕು ಎಂದರು.