ಪತಿ-ಪತ್ನಿ ಮಧ್ಯೆ ವೈವಾಹಿಕ ಕಲಹದ ಬಳಿಕ ಮಗುವನ್ನು ಭೇಟಿಯಾಗಲು ತಂದೆಗೆ ಹಕ್ಕು ನಿರಾಕರಿಸಿದ ಮಾತ್ರಕ್ಕೆ ಮಗುವಿನ ಪೋಷಣೆಯ ಜವಾಬ್ಧಾರಿಯಿಂದ ಆತ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅಪ್ರಾಪ್ತ ಮಗು ಅಥವಾ ಮಕ್ಕಳ ರಕ್ಷಣೆ, ಪಾಲನೆ ಪೋಷಣೆಗೆ ತಂದೆ ಕರ್ತವ್ಯ ಬದ್ಧನಾಗಿರಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಹಿಳೆಯೊಬ್ಬರು ಸಲ್ಲಿಸಿದ ಪ್ರಕರಣದ ವರ್ಗಾವಣೆ ಅರ್ಜಿಗೆ ಸಂಬಂಧಿಸಿದಂತೆ ಆದೇಶಗಳನ್ನು ನೀಡುವಾಗ ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣ್ಯಂ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಮಹಿಳೆಯ ಪತಿ ತಾಯಿಯ ವಶದಲ್ಲಿರುವ ತಮ್ಮ ಅಪ್ರಾಪ್ತ ಮಗುವಿಗೆ ಮಧ್ಯಂತರ ಜೀವನಾಂಶವನ್ನು ಪಾವತಿಸುತ್ತಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಅಪ್ರಾಪ್ತ ಮಗುವನ್ನು ನೋಡಿಕೊಳ್ಳಲು ತಂದೆ ಸಿದ್ಧರಿದ್ದಾರೆ, ಆದ್ರೆ ಮಗುವನ್ನು ನೋಡಲು ಆತನ ಮಾಜಿ ಪತ್ನಿ ಅನುಮತಿಸುವುದಿಲ್ಲ. ಆದ್ದರಿಂದ ಅವರು ಮಧ್ಯಂತರ ಜೀವನಾಂಶವನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಪತಿಯ ಪರ ವಕೀಲರು ಹೇಳಿದರು. ಮಗುವನ್ನು ಭೇಟಿ ಮಾಡಲು ಪತ್ನಿ ಅನುಮತಿ ನೀಡದ ಹೊರತು ಮಧ್ಯಂತರ ಜೀವನಾಂಶವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಕೀಲರು ಪುನರುಚ್ಚರಿಸಿದರು.
ಪತಿಯ ವರ್ತನೆಗೆ ಛೀಮಾರಿ ಹಾಕಿದ ಕೋರ್ಟ್, ನ್ಯಾಯಾಲಯವು ಇದನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 11 ತಿಂಗಳ ಹೆಣ್ಣು ಮಗುವನ್ನು ಸ್ವಾಭಾವಿಕ ಪಾಲಕ ಮತ್ತು ಗಳಿಸುವ ಸದಸ್ಯನಾಗಿರುವ ಪತಿ ನೋಡಿಕೊಳ್ಳಬೇಕು ಎಂದು ಕಟ್ಟಾಜ್ಞೆ ಮಾಡಿದೆ. 2020ರಲ್ಲಿ ಇವರ ವಿವಾಹ ನೆರವೇರಿತ್ತು. ಆದರೆ ಪರಸ್ಪರ ಹೊಂದಾಣಿಕೆಯ ಕೊರತೆಯಿಂದಾಗಿ ಇಬ್ಬರೂ ದೂರವಾಗಲು ನಿರ್ಧರಿಸಿದರು. ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಮಹಿಳೆ ತಿರುಚಿರಾಪಳ್ಳಿಯಲ್ಲಿರುವ ತನ್ನ ಪೋಷಕರ ಮನೆಗೆ ಮರಳಿದ್ದಾಳೆ. ಪತಿ ಪೂನಮಲ್ಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಮೊಕದ್ದಮೆ ಹೂಡಿದ್ದಾನೆ.
ಈ ಪ್ರಕರಣವನ್ನು ತಿರುಚಿರಾಪಳ್ಳಿಯಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯ ಮನವಿಗೆ ಪತಿ ಆಕ್ಷೇಪ ವ್ಯಕ್ತಪಡಿಸಿದ್ದು, ತಾನು ದಂತವೈದ್ಯನಾಗಿದ್ದು ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಹಾಗಾಗಿ ಕೇಸ್ ವರ್ಗಾವಣೆ ಬೇಡವೆಂದು ವಾದಿಸಿದ್ದಾನೆ. ಮಧ್ಯಂತರ ಜೀವನಾಂಶಕ್ಕಾಗಿ ಮಹಿಳೆ ಅರ್ಜಿ ಸಲ್ಲಿಸದೇ ಇರುವುದನ್ನು ಕೋರ್ಟ್ ಗಮನಿಸಿದೆ. ಆದರೆ ಅರ್ಜಿ ಸಲ್ಲಿಸದೇ ಇದ್ದರೂ ಸಹ ಅಪ್ರಾಪ್ತ ಮಕ್ಕಳ ಹಿತದೃಷ್ಟಿಯಿಂದ ಮತ್ತು ಅವರ ರಕ್ಷಣೆಗಾಗಿ ಮಧ್ಯಂತರ ಜೀವನಾಂಶವನ್ನು ನೀಡಲೇಬೇಕೆಂದು ಕೋರ್ಟ್ ಸೂಚಿಸಿದೆ. ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅವರ ಮೂಲಭೂತ ಹಕ್ಕು ಎಂದು ಹೇಳಿದೆ.