ಮನುಷ್ಯನ ಸ್ವಭಾವವೇ ಹಾಗೆ. ಇರುವುದೆಲ್ಲವ ಬಿಟ್ಟು ಇಲ್ಲದಿರುವುದನ್ನೇ ಬಯಸುತ್ತದೆ. ಬಯಕೆ ಹೆಚ್ಚಿದಂತೆಲ್ಲಾ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಮನುಷ್ಯನಲ್ಲಿ ಆಸೆಗಳಿರಬೇಕು. ಆದರೆ. ಅತಿಯಾದ ಆಸೆ ಒಳ್ಳೆಯದಲ್ಲ,
ಆಸೆ, ಆಕಾಂಕ್ಷೆಗಳಿಲ್ಲದಿದ್ದರೆ ಮನುಷ್ಯನೇ ಅಲ್ಲ. ಮನುಷ್ಯ ಸಹಜವಾದ ಆಸೆಗಳು ಇರಬೇಕು. ಅತಿಯಾದ ಆಸೆಗಳು ನೆಮ್ಮದಿಯನ್ನೇ ಹಾಳು ಮಾಡುತ್ತವೆ. ನಾವು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆ. ಬಹುತೇಕರು ತಮ್ಮ ಜೀವನವನ್ನು ಇನ್ನೊಬ್ಬರಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಹೀಗೆ ಕೊರಗುವ ಬದಲಿಗೆ, ನಿಮಗಿಂತ ಕೆಳಗಿನವರನ್ನು ನೋಡಿ ಬದುಕುವುದನ್ನು ಕಲಿಯಿರಿ. ಆಗ ನಿಮ್ಮಲ್ಲಿ ಬೇರೆಯದೇ ಆದ ಭಾವನೆ ಮೂಡುತ್ತದೆ.
ಮೊದಲಿಗೆ ಸಮಸ್ಯೆ ಎದುರಿಸುವುದು, ಮನಸ್ಸನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ಕೆಲವರು ಸಣ್ಣ ಸಮಸ್ಯೆಗಳಿಗೂ ಭಯಪಡುತ್ತಾರೆ. ಅದು ತನ್ನಿಂದ ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾರೆ. ಸಮಸ್ಯೆ, ಸವಾಲುಗಳೇ ನಿಮ್ಮನ್ನು ಪರಿಪೂರ್ಣರನ್ನಾಗಿಸಲು ಸಹಕಾರಿಯಾಗುತ್ತದೆ.
ಮನಸ್ಸನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಎಲ್ಲವನ್ನು ಬೇಕು, ಬೇಕು ಎಂದು ಬಯಸಿದಲ್ಲಿ ನಿಯಂತ್ರಣವೇ ಇಲ್ಲದಂತಾಗುತ್ತದೆ. ಅತಿಯಾದ ಆಸೆಯನ್ನು ಕೈಬಿಟ್ಟು ಇರುವುದರಲ್ಲೇ ಖುಷಿಯಾಗಿರಲು ಪ್ರಯತ್ನಿಸಿ. ನಿಮ್ಮ ಭಾವನೆ ಬದಲಿಸಿಕೊಳ್ಳಿ. ನಾವಿರುವ ಸ್ಥಿತಿಯಲ್ಲೇ ನೆಮ್ಮದಿಯಾಗಿರಲು ಸಾಧ್ಯವಿದೆ. ಅದಕ್ಕೆ ಮನಸಿನ ಮೇಲೆ ನಿಯಂತ್ರಣ ಅವಶ್ಯಕ ಎನ್ನುತ್ತಾರೆ ತಿಳಿದವರು.