ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಮನೆಯ ಮೂಲೆ ಮೂಲೆಯು ವಾಸ್ತು ಪ್ರಕಾರ ಮಹತ್ವ ಪಡೆಯುತ್ತದೆ. ಹಾಗಾಗಿ ದೇವರ ಮನೆಯನ್ನು ಕೂಡ ಸೂಕ್ತ ಸ್ಥಳದಲ್ಲಿ ಮಾಡ್ಬೇಕು. ದೇವರ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರಬೇಕು. ದೇವರ ಮನೆ ವಾಸ್ತು ಪ್ರಕಾರ ಇಲ್ಲದೆ ಹೋದ್ರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲವಾಗುತ್ತದೆ. ಹಾಗಾಗಿ ಮನೆ ನಿರ್ಮಾಣ ಮಾಡುವ ಮೊದಲು ದೇವರ ಮನೆಯನ್ನು ಎಲ್ಲಿ ನಿರ್ಮಿಸಬೇಕೆಂಬುದನ್ನು ವಾಸ್ತು ತಜ್ಞರಿಂದ ತಿಳಿಯುವುದು ಬಹಳ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆ ನಿರ್ಮಾಣ ಮಾಡುವ ವೇಳೆ ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರುವುದು ಬಹಳ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ನೈಋತ್ಯ ದಿಕ್ಕಿಗೆ ಎಂದೂ ದೇವರ ಮನೆಯನ್ನು ನಿರ್ಮಾಣ ಮಾಡಬೇಡಿ. ಇದ್ರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಮನೆಯ ನೈಋತ್ಯ ದಿಕ್ಕಿಗೆ ದೇವರ ಮನೆಯಿದ್ರೆ ಇಂದೇ ಬದಲಿಸಿ.
ಮಲಗುವ ಕೋಣೆ, ಅಡುಗೆ ಮನೆ ಅಥವಾ ಮೆಟ್ಟಿಲು ಮತ್ತು ಶೌಚಾಲಯಕ್ಕೆ ದೇವರ ಮನೆ ತಾಗಿರದಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನೆಲ ಮಾಳಿಗೆಯಲ್ಲಿ ದೇವರ ಮನೆ ನಿರ್ಮಾಣ ಮಾಡಬೇಡಿ. ದೇವರ ಮನೆಗೆ ಕೆಂಪು ಬಲ್ಬ್ ಹಾಕಬೇಡಿ. ಬಿಳಿ ಬಣ್ಣದ ಬಲ್ಬ್ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ನಿಮಗೆ ನೆನಪಿರಲಿ. ದೇವರ ಮನೆಯಲ್ಲಿ ಒಡೆದ ಅಥವಾ ಹಾಳಾದ ಯಾವುದೇ ವಸ್ತುವನ್ನು ಇಡಬೇಡಿ. ಒಡೆದ ವಿಗ್ರಹಕ್ಕೆ ಪೂಜೆ ಮಾಡಬೇಡಿ.