ಜೀವನ ನಶ್ವರ ಎಂಬ ಮಾತನ್ನು ಸಾಮಾನ್ಯವಾಗಿ ಕೆಲವರು ಹೇಳುವುದನ್ನು ಕೇಳಿರುತ್ತೇವೆ. ಮತ್ತೆ ಕೆಲವರು ಇರುವ ಅಲ್ಪ ಕಾಲದ ಈ ಜೀವನದಲ್ಲಿ ಮಜಾ ಅನುಭವಿಸಬೇಕು ಎನ್ನುವುದನ್ನು ಕಂಡಿದ್ದೇವೆ. ಇಷ್ಟಕ್ಕೆ ಜೀವನ ಮುಗಿದಂತೆ ಆಗುವುದಿಲ್ಲ. ಸಂಘ ಜೀವಿಯಾಗಿರುವ ಮಾನವ ಸಮಾಜದಲ್ಲಿ ಬದುಕಲು ಒಂದಿಷ್ಟು ಉಪಯುಕ್ತ ಸಲಹೆ ಇಲ್ಲಿದೆ.
ನಿಮ್ಮನ್ನು ಹೊಗಳಿ ಇನ್ನೊಬ್ಬರ ತಪ್ಪುಗಳ ಬಗ್ಗೆ ಮಾತನಾಡುವ ವ್ಯಕ್ತಿಗಳು ನಿಮ್ಮ ಹಿಂದೆ ನಿಮ್ಮ ಬಗ್ಗೆಯೂ ಆರೋಪ ಮಾಡುವುದುಂಟು, ಇಂತಹವರ ಬಗ್ಗೆ ಎಚ್ಚರಿಕೆ ವಹಿಸಿರಿ. ನಮ್ಮ ತಪ್ಪುಗಳನ್ನು ನೇರವಾಗಿ ಹೇಳುವವರು ನಮಗೆ ಶತ್ರುವಿನಂತೆ ಕಂಡರೂ ಅವರೇ ನಮಗೆ ನಿಜವಾದ ಮಿತ್ರರು ಎಂದು ತಿಳಿಯಬೇಕು. ಮನುಷ್ಯನಿಗೆ ಸ್ವಾರ್ಥ ಇರಬೇಕು ನಿಜ, ಆದರೆ ಅದು ಅತಿಯಾಗಬಾರದು. ಸಮಾಜದ ಕೆಲಸಕ್ಕೂ ಸ್ವಲ್ಪ ದುಡಿಯಿರಿ. ಹಾಗೆಂದು ಮನೆ- ಸಂಸಾರವನ್ನು ಎಂದಿಗೂ ಮರೆಯದಿರಿ.
ನಮ್ಮ ಸುತ್ತಲಿನವರು ಖುಷಿಯಾಗಿದ್ದರೆ ನಾವೂ ಖುಷಿಯಾಗಿರಲು ಸಾಧ್ಯವಿದೆ, ನಮ್ಮಿಂದ ಸಹಾಯ ಪಡೆದವರಿಗೆ ಖುಷಿ ಆಗುತ್ತೋ ಇಲ್ಲವೋ..? ಆದರೆ ಸಹಾಯ ಮಾಡಿದವರಿಗೆ ಸಿಗುವ ಆನಂದ ಬೇರೆಲ್ಲೂ ಸಿಗಲ್ಲ. ತಪ್ಪು ಮಾಡಿದ ಕಾರಣಕ್ಕೆ ಕೊರಗಬೇಡಿ, ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ತಿದ್ದಿಕೊಳ್ಳುವ ಗುಣ ಬೆಳೆಸಿಕೊಳ್ಳಿರಿ, ಇನ್ನೊಬ್ಬರಿಗೆ ಬುದ್ದಿ ಹೇಳುವುದು ಸುಲಭ ಆದರೆ ಪಾಲಿಸುವುದು ಕಷ್ಟ, ಮನಸ್ಸಿದ್ದರೆ ಎಲ್ಲದಕ್ಕೂ ಮಾರ್ಗವಿದೆ ಎಂಬುದಂತೂ ನಿಜ.