ಕೆಲವರಿಗೆ ಪಾದಗಳಲ್ಲಿ ಅತಿಯಾಗಿ ಬೆವರು ಬರುತ್ತದೆ. ಇದರಿಂದ ಪಾದಗಳಿಂದ ಕೆಟ್ಟ ವಾಸನೆ ಕೂಡ ಹೊರಸೂಸಲಾರಂಭಿಸುತ್ತದೆ. ಈ ರೀತಿ ಪಾದಗಳು ವಾಸನೆ ಬರುವುದಕ್ಕೆ ಕಾರಣಗಳು ಸಾಕಷ್ಟಿವೆ. ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಾಗಳ ಶೇಖರಣೆಯಿಂದಾಗಿ ದುರ್ವಾಸನೆ ಬರಬಹುದು. ಅತಿಯಾಗಿ ಬೆರವರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಕೆಲವೊಂದು ಸುಲಭ ಟಿಪ್ಸ್ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅದ್ಹೇಗೆ ಅನ್ನೋದನ್ನು ನೋಡೋಣ.
ಪಾದಗಳಿಂದ ವಾಸನೆ ಬರುವುದೇಕೆ?
ಈ ಮೊದಲೇ ಹೇಳಿದಂತೆ ಬೆವರು ಕೂಡ ಇದಕ್ಕೆ ಕಾರಣ. ಕೆಲವೊಮ್ಮೆ ಬಿಗಿಯಾದ ಬೂಟುಗಳನ್ನು ಧರಿಸಿದರೆ, ಪಾದಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಪಾದಗಳಲ್ಲಿ ಶಾಖ ಹೆಚ್ಚಾಗಿ ಅತಿಯಾದ ಬೆವರು ಮತ್ತು ವಾಸನೆಗೆ ಕಾರಣವಾಗುತ್ತದೆ. ಸಾಕ್ಸ್ ಧರಿಸುವುದರಿಂದ ಬೆವರು ಒಣಗುತ್ತದೆ ಎಂಬ ಭಾವನೆ ತಪ್ಪು, ಬದಲಾಗಿ ಪಾದಗಳಲ್ಲಿ ವಾಸನೆ ಹೆಚ್ಚಾಗುತ್ತದೆ.
ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಸತ್ತ ಜೀವಕೋಶಗಳಲ್ಲಿ ಮತ್ತು ಚರ್ಮದಲ್ಲಿರುವ ಎಣ್ಣೆಯಲ್ಲಿ ಮಿಶ್ರಣಗೊಳ್ಳುತ್ತವೆ. ಇದರಿಂದಾಗಿ ಪಾದಗಳಿಂದ ವಾಸನೆ ಬರುತ್ತದೆ. ನಮ್ಮ ಪಾದಗಳು ಬೆವರು ಗ್ರಂಥಿಗಳನ್ನು ಹೊಂದಿದ್ದು, ಬೆವರಿನಿಂದಾಗಿ ಪಾದಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಅವು ವಿಶೇಷ ರೀತಿಯ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ವಾಸನೆಯನ್ನು ಉಂಟುಮಾಡುತ್ತದೆ.
ಪಾದಗಳ ವಾಸನೆಗೆ ಪರಿಹಾರವೇನು?
ಉಪ್ಪು ನೀರಿನಲ್ಲಿ ಪಾದಗಳನ್ನು ಮುಳುಗಿಸಿ ಕುಳಿತುಕೊಂಡರೆ ಅಥವಾ ಉಪ್ಪು ನೀರಿನಿಂದ ನಿಮ್ಮ ಪಾದಗಳನ್ನು ತೊಳೆದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಅರ್ಧ ಲೀಟರ್ ನೀರಿಗೆ ಅರ್ಧ ಕಪ್ ಉಪ್ಪನ್ನು ಬೆರೆಸಿ ಅದರಲ್ಲಿ ಪಾದಗಳನ್ನು ಅದ್ದಿಕೊಂಡು 15 ನಿಮಿಷಗಳ ಕಾಲ ಕುಳಿತಿರಬೇಕು. ನಂತರ ಪಾದಗಳನ್ನು ಒಣಗಿಸಿಕೊಳ್ಳಿ.
ನಿಮ್ಮ ಬೂಟುಗಳು ಅಥವಾ ಸ್ಯಾಂಡಲ್‌ಗಳ ಒಳಗೆ ಸ್ವಲ್ಪ ವೈಟ್ ವಿನೆಗರ್ ಹಾಕಿ. ಅದು ಪಾದರಕ್ಷೆಗಳು ಮತ್ತು ಪಾದಗಳಿಂದ ದುರ್ವಾಸನೆ ಬೀರದಂತೆ ತಡೆಯುತ್ತದೆ. ವೈಟ್ ವಿನೆಗರ್ ಕೆಟ್ಟ ವಾಸನೆಯನ್ನು ಆಕರ್ಷಿಸಿ, ಹೀರಿಕೊಳ್ಳುತ್ತದೆ. ಒದ್ದೆ ಬೂಟುಗಳನ್ನು ಧರಿಸಬೇಡಿ. ಬೂಟುಗಳನ್ನು ಚೆನ್ನಾಗಿ ಒಣಗಿಸಿ ಏಕೆಂದರೆ ಒದ್ದೆಯಾದ ಬೂಟುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ನೀವು ಸೂರ್ಯನ ಬೆಳಕಿನಲ್ಲಿ ಅಥವಾ ಡ್ರೈಯರ್‌ನಲ್ಲಿ ಬೂಟುಗಳನ್ನು ಒಣಗಿಸಬಹುದು.
ಪಾದರಕ್ಷೆಗಳನ್ನು ವಾರಕ್ಕೊಮ್ಮೆ ತೊಳೆಯಬೇಕು. ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣದಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿ ಕುಳಿತುಕೊಳ್ಳಬೇಕು. ಇದರಿಂದ ಪಾದಗಳ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತದೆ ಮತ್ತು ವಾಸನೆಯೂ ದೂರವಾಗುತ್ತದೆ. ಅಡುಗೆ ಸೋಡಾ ಬಳಕೆಯಿಂದ ಪಾದಗಳಲ್ಲಿ ಸೋಂಕಿನ ಭಯ ಇರುವುದಿಲ್ಲ. ಪಾದಗಳಲ್ಲಿ ದುರ್ವಾಸನೆ ಬಂದರೆ ಮೊದಲು ಪಾದಗಳನ್ನು ಚೆನ್ನಾಗಿ ತೊಳೆದು, ನಂತರ ಪಾದಗಳಿಗೆ ರೋಸ್ ವಾಟರ್ ಚಿಮುಕಿಸಿ ಹಾಗೇ ಒಣಗಲು ಬಿಡಿ, ಬಳಿಕ ಮಾಯಿಶ್ಚರೈಸರ್ ಹಚ್ಚಿ.
ವಾಸನೆಯನ್ನು ಹೋಗಲಾಡಿಸಲು ನೀವು ನಿಂಬೆಯನ್ನು ಸಹ ಬಳಸಬಹುದು. ಒಂದು ಕಪ್ ನೀರಿಗೆ ನಿಂಬೆರಸ ಬೆರೆಸಿ ಅದರಿಂದ ಪಾದಗಳನ್ನು ತೊಳೆದರೆ ದುರ್ವಾಸನೆ ದೂರವಾಗುತ್ತದೆ. ಅರ್ಧ ನಿಂಬೆಹಣ್ಣಿನ ರಸವನ್ನು ಪಾದಗಳಿಗೆ ಹಚ್ಚುವುದರಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪಾದದ ದುರ್ವಾಸನೆ ಹೋಗಲಾಡಿಸಲು ನೀವು ಚಹಾ ಪುಡಿ ಅಥವಾ ಟೀ ಬ್ಯಾಗ್‌ಗಳನ್ನು ಸಹ ಬಳಸಬಹುದು. ಟೀ ಬ್ಯಾಗ್ ಬಿಸಿ ನೀರಿನಲ್ಲಿ ಅದ್ದಿ, ನಂತರ ಅದರಲ್ಲಿ ಪಾದಗಳನ್ನು ಸೋಕಿಸಿದರೆ ವಾಸನೆ ನಿವಾರಣೆಯಾಗುತ್ತದೆ.