ಸೆಖೆಯಲ್ಲಿ ಬೆಂದು ಬಂದಾಗ ತಣ್ಣನೆಯ ನೀರು ಕುಡಿದ್ರೆ ಆಹ್ಲಾದವೆನಿಸುವುದೇನೋ ಸತ್ಯ. ಆದ್ರೆ ಫ್ರಿಡ್ಜ್ ನಲ್ಲಿಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ.
ಅದರ ಬದಲು ಮಣ್ಣಿನ ಮಡಕೆಯಲ್ಲಿಟ್ಟ ತಣ್ಣನೆಯ ನೀರು ಕುಡಿಯಿರಿ ಅಂತ ಮನೆಯ ಹಿರಿಯರು ಬುದ್ಧಿ ಮಾತು ಹೇಳ್ತಾನೇ ಇರ್ತಾರೆ. ಆದ್ರೆ ಅದನ್ನು ಕಿವಿಗೆ ಹಾಕಿಕೊಳ್ಳುವವರು ಅಪರೂಪ. ಫ್ರಿಡ್ಜ್ ನಲ್ಲಿಟ್ಟ ತಣ್ಣನೆಯ ನೀರು ನಿಮ್ಮ ದೇಹಕ್ಕೆ ಅಪಾಯಕಾರಿ. ಅನೇಕ ಕಾಯಿಲೆಗಳಿಗೆ ಇದು ಆಹ್ವಾನ ಕೊಡುತ್ತದೆ.
ಕೋಲ್ಡ್ ವಾಟರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ತಣ್ಣನೆಯ ನೀರು ಕುಡಿಯುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ತೈವಾನ್ ನಲ್ಲಿ ನಡೆಸಿರೋ ಒಂದು ಸಂಶೋಧನೆಯ ಪ್ರಕಾರ ತಣ್ಣನೆಯ ನೀರು ನಿಮ್ಮ ಹೃದಯಕ್ಕೂ ಒಳ್ಳೆಯದಲ್ಲ. ಇದರಿಂದ ಹೃದಯ ಬಡಿತವೇ ಕಡಿಮೆಯಾಗಿಬಿಡುತ್ತದೆ.
ತಣ್ಣೀರು ಕುಡಿಯುವುದರಿಂದ ಮಲಬದ್ಧತೆಯೂ ಉಂಟಾಗುತ್ತದೆ. ಆಹಾರ ತಿಂದ ನಂತರ ತಣ್ಣೀರು ಕುಡಿದರೆ ಅದು ಜೀರ್ಣವಾಗಲು ಕಷ್ಟವಾಗುತ್ತದೆ. ಕೋಲ್ಡ್ ವಾಟರ್ ಕುಡಿದ ನಂತರ ಎಷ್ಟೋ ಮಂದಿಗೆ ತಲೆನೋವು ಬರುತ್ತದೆ. ಮಂಜುಗಡ್ಡೆಯನ್ನೇನಾದ್ರೂ ನೀವು ತಿಂದರೆ ಮರುಕ್ಷಣವೇ ನಿಮಗೆ ಹಣೆಯಲ್ಲಿ ನೋವು ಶುರುವಾಗುತ್ತದೆ. ವಾಸ್ತವವಾಗಿ ಫ್ರಿಡ್ಜ್ ನಲ್ಲಿಟ್ಟ ತಣ್ಣೀರು ಸೂಕ್ಷ್ಮ ನರಗಳನ್ನು ತಣ್ಣಗಾಗಿಸುತ್ತದೆ. ತಕ್ಷಣವೇ ಅವು ನಿಮ್ಮ ಮೆದುಳಿಗೆ ಸಂದೇಶ ರವಾನಿಸುವುದರಿಂದ ತಲೆನೋವು ಬರುತ್ತದೆ. ಹಾಗಾಗಿ ಸೆಖೆ ಇದೆ ಎಂದುಕೊಂಡು ಫ್ರಿಡ್ಜ್ ನಲ್ಲಿಟ್ಟ ನೀರನ್ನು ಕುಡಿಯಬೇಡಿ.