ಹಾಲು ಸಂಪೂರ್ಣ ಆಹಾರ. ಮಕ್ಕಳ ಆರೋಗ್ಯಕ್ಕಂತೂ ಇದು ತುಂಬಾನೇ ಒಳ್ಳೆಯದು. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಈ ಕಾರಣದಿಂದಾಗಿ ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಕೆಲವರು ಬೆಳಗ್ಗೆ ಮನೆಯಿಂದ ಹೊರಡುವ ಮೊದಲು ಹಾಲು ಕುಡಿಯಲು ಇಷ್ಟಪಡುತ್ತಾರೆ. ಇನ್ನು ಕೆಲವರು ರಾತ್ರಿ ಮಲಗುವ ಮೊದಲು ಸೇವಿಸುತ್ತಾರೆ. ಆದ್ರೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಹಲವು ದುಷ್ಪರಿಣಾಮಗಳಿವೆ.
ಹಾಲಿನಲ್ಲಿ ಲ್ಯಾಕ್ಟೋಸ್ ಮತ್ತು ಪ್ರೋಟೀನ್ ಅಂಶಗಳಿವೆ. ಹಾಗಾಗಿ ಮಲಗುವ ಮುನ್ನ ಅದನ್ನು ಕುಡಿಯಬಾರದು. ಇದು ನಿಮ್ಮ ನಿದ್ರೆಯನ್ನು ನಿಧಾನಗೊಳಿಸುತ್ತದೆ, ಕೆಲವೊಮ್ಮೆ ನಿದ್ರಾಹೀನತೆ ಕೂಡ ಉಂಟಾಗಬಹುದು. ರಾತ್ರಿಯ ಸಮಯದಲ್ಲಿ ಯಕೃತ್ತು ದೇಹದಲ್ಲಿ ಡಿಟಾಕ್ಸ್ ಕೆಲಸ ಪ್ರಾರಂಭಿಸುತ್ತದೆ. ಹಾಲು ಡಿಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ತೊಂದರೆ ಮಾಡುತ್ತದೆ.
ರಾತ್ರಿ ಹಾಲು ಕುಡಿಯುವವರಲ್ಲಿ ಲಿವರ್ ನ ಕಾರ್ಯಗಳು ತುಂಬಾ ನಿಧಾನವಾಗುತ್ತವೆ. ರಾತ್ರಿ ಬಿಸಿ ಬಿಸಿ ಹಾಲು ಕುಡಿದ್ರೆ ಸ್ವಲ್ಪ ಮಟ್ಟಿಗೆ ಸೂಕ್ತ, ಆದ್ರೆ ಅಪ್ಪಿ ತಪ್ಪಿಯೂ ತಣ್ಣಗಿರುವ ಹಾಲು ಕುಡಿಯಲೇ ಬೇಡಿ ಅನ್ನೋದು ತಜ್ಞ ವೈದ್ಯರ ಸಲಹೆ. ರಾತ್ರಿ ಹಾಲು ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ. ಅಜೀರ್ಣ ಅಥವಾ ಮಲಬದ್ಧತೆಯಿದ್ದಲ್ಲಿ ರಾತ್ರಿ ಹಾಲು ಕುಡಿಯುವುದನ್ನು ನಿಲ್ಲಿಸಿಬಿಡಿ.
ರಾತ್ರಿ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯೂ ಇದೆ. ಒಂದು ಲೋಟ ಹಾಲಿನಲ್ಲಿ 120 ಕ್ಯಾಲೋರಿ ಇರುತ್ತದೆ. ರಾತ್ರಿ ನೀವು ಕುಡಿದು ಮಲಗಿಬಿಟ್ಟರೆ ಕ್ಯಾಲೋರಿ ಬರ್ನ್ ಮಾಡಲು ಸಹ ಅವಕಾಶವಿರುವುದಿಲ್ಲ.