ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತವೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು ಮನೆಯಲ್ಲೇ ದಪ್ಪನೆಯ ರುಚಿಕರ ಮೊಸರು ಹೇಗೆ ತಯಾರಿಸುವುದು ನೋಡಿ.
ಮೊಸರು ತಯಾರಿಸಲು ದಪ್ಪನೆಯ ಫ್ಯಾಟ್ ಹಾಲನ್ನೇ ಬಳಸಿ. ಚಳಿಗಾಲದಲ್ಲಿ ಇದು ಬಹುಬೇಗ ಕೆಡುವ ಸಾಧ್ಯತೆ ಇರುವುದರಿಂದ ಹಾಲನ್ನು ಚೆನ್ನಾಗಿ ಕುದಿಸಿ.
ಹಾಲು ಸಂಪೂರ್ಣ ತಣ್ಣಗಾದ ಬಳಿಕವೇ ಹೆಪ್ಪು ಮುಟ್ಟಿಸಿ. ಒಂದರಿಂದ ಎರಡು ಚಮಚ ಮೊಸರು ಇಲ್ಲವೇ ಮಜ್ಜಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚಮಚ ಬಳಸಿ ತಿರುಗಿಸುವುದು ಒಳ್ಳೆಯದು. ಅಂಗಡಿಯಿಂದ ತಂದ ಮೊಸರನ್ನು ಹೆಪ್ಪಿಗೆ ಬಳಸುವ ಬದಲು ಮನೆಯಲ್ಲೇ ತಯಾರಿಸಿದ ಮಜ್ಜಿಗೆ ಸೇರಿಸುವುದು ಒಳ್ಳೆಯದು.
ಹೆಪ್ಪು ಹಾಕಿದ ಬಳಿಕ ತಪ್ಪಿಯೂ ಫ್ರಿಜ್ ನಲ್ಲಿ ಇಡದಿರಿ. ಬೆಚ್ಚಗಿನ ಜಾಗದಲ್ಲೇ ತೆಗೆದಿಡಿ. ರಾತ್ರಿ ಹೆಪ್ಪು ಹಾಕಿ ಬೆಳಗ್ಗೆ ಉಪಯೋಗಿಸಿದರೆ ರುಚಿ ಹೆಚ್ಚು. ಮಧ್ಯಾಹ್ನಕ್ಕೆ ದಪ್ಪನೆಯ ಮೊಸರು ಬೇಕಿದ್ದರೆ ಬೆಳಿಗ್ಗೆ ಎದ್ದಾಕ್ಷಣ ಹೆಪ್ಪು ಹಾಕಿದರೆ ಸಾಕು. ಹುಳಿಯಾದ ಮೊಸರು ತಯಾರಿಸಲು ಹಿಂದಿನ ಸಂಜೆ ಹೆಪ್ಪು ಹಾಕಿ ಮರುದಿನ ಮಧ್ಯಾಹ್ನಕ್ಕೆ ಬಳಸಿ.