ಹೊಸದಾಗಿ ತಯಾರಿಸಿದ್ದು, ಹಳೆಯದು ಉಳಿದದ್ದು, ಬೇಕಿರುವುದು ಬೇಡದ್ದು ಎಲ್ಲವನ್ನೂ ಫ್ರಿಜ್ ನಲ್ಲಿ ತುರುಕಿಡುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ಖಂಡಿತಾ ನಿಮ್ಮ ಫ್ರಿಜ್ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ ಗೊತ್ತೇ?
ಫ್ರಿಜ್ ನಲ್ಲಿಟ್ಟ ಯಾವುದಾದರೊಂದು ವಸ್ತು ಹಾಳಾದರೆ ಸಾಕು ಅದು ತನ್ನ ಕೆಟ್ಟ ವಾಸನೆಯನ್ನು ಫ್ರಿಜ್ ನಲ್ಲಿರುವ ಎಲ್ಲಾ ವಸ್ತುಗಳಿಗೂ ದಾಟಿಸಿ ಬಿಡುತ್ತದೆ. ಹಾಗಾಗಿ ಕೆಟ್ಟ ಆಹಾರವನ್ನು ಫ್ರಿಜ್ ನಲ್ಲಿ ಇಡಲೇ ಬೇಡಿ. ಅದನ್ನು ತೆಗೆದು ಹೊರಹಾಕಿ.
ಬೆಳ್ಳುಳ್ಳಿ ಹಾಕಿ ತಯಾರಿಸಿದ ಆಹಾರ ಪದಾರ್ಥಗಳು ಬಹುಬೇಗ ದುರ್ವಾಸನೆ ಬೀರಿ, ಇತರ ವಸ್ತುಗಳನ್ನೂ ಹಾಳುಗೆಡಹುತ್ತವೆ. ಇದನ್ನು ಗಾಳಿಯಾಡದ ಗಾಜಿನ ಕಂಟೈನರ್ ನಲ್ಲಿ ಹಾಕಿಡುವುದೇ ಒಳ್ಳೆಯದು.
ದೀರ್ಘ ಕಾಲ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಫ್ರಿಜ್ ನಲ್ಲಿ ಹೆಚ್ಚಿನ ತರಕಾರಿ-ಆಹಾರ ಪದಾರ್ಥಗಳನ್ನು ಇಡಬೇಡಿ. ಇದು ಕೆಡುವ ಸಾಧ್ಯತೆಗಳೇ ಹೆಚ್ಚು. ಸೆಲ್ಫ್ ಗಳ ಮೇಲ್ಮೈಯನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.
ಬೇಕಿಂಗ್ ಸೋಡಾದ ಪೇಸ್ಟ್ ಅನ್ನು ಫ್ರಿಜ್ ನ ಒಳಭಾಗದಲ್ಲಿ ಸಂದು ಗೊಂದುಗಳಿಗೆ ಹಚ್ಚುವುದರಿಂದ ಕೆಟ್ಟ ವಾಸನೆಯನ್ನು ಅದು ಹೀರಿಕೊಳ್ಳುತ್ತದೆ. ಫ್ರಿಜ್ ಅನ್ನು ಸದಾ ಮೀಡಿಯಂ ಮೋಡ್ ನಲ್ಲೇ ಇಡಿ. ಕಡಿಮೆ ಸೆಲ್ಸಿಯಸ್ ನಲ್ಲಿ ಇಟ್ಟರೆ ಸೂಕ್ಷ್ಮಾಣು ಹೆಚ್ಚಬಹುದು.