ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ ಅನ್ನು ಮನೆಯಲ್ಲಿಯೇ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು: ½ ಕಪ್ ಸಣ್ಣಗೆ ಕತ್ತರಿಸಿದ ಈರುಳ್ಳಿ, ¾ ಕಪ್ ಕತ್ತರಿಸಿದ ಟೊಮೆಟೊ, ½ ಇಂಚು ಶುಂಠಿ, ಬೆಳ್ಳುಳ್ಳಿ-2 ಎಸಳು, ಹಸಿಮೆಣಸು-2 ಗೋಡಂಬಿ 10, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 4 ಕಾಳು ಕಾಳು ಮೆಣಸು, ½ ಇಂಚು ಚಕ್ಕೆ, 1 ಟೀ ಸ್ಪೂನ್ ಕೊತ್ತಂಬರಿ ಬೀಜ, 2 ಲವಂಗ. ಇವಿಷ್ಟನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೀರು ಸೇರಿಸುವ ಅಗತ್ಯವಿಲ್ಲ.
ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ. ನಂತರ ಇದಕ್ಕೆ ½ ಟೀ ಸ್ಪೂನ್ ಜೀರಿಗೆ ಕಾಳು ಹಾಕಿ. ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ. 10 ನಿಮಿಷ ಮಂದ ಉರಿಯಲ್ಲಿ ಇದನ್ನು ಬೇಯಿಸಿಕೊಳ್ಳಿ. ನಂತರ ಇದಕ್ಕೆ ಚಿಟಿಕೆ ಅರಿಸಿನ, ½ ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ, , ½ ಟೀ ಸ್ಪೂನ್ ಗರಂ ಮಸಾಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ನೆನೆಸಿಟ್ಟುಕೊಂಡ 1 ಕಪ್ ಬಟಾಣಿಯನ್ನು ಇದಕ್ಕೆ ಸೇರಿಸಿ. ನಂತರ ಇದಕ್ಕೆ 1 ಕಪ್ ನೀರು ಹಾಕಿ ಚೆನ್ನಾಗಿ ಕೈಯಾಡಿಸಿ. 2 ರಿಂದ 3 ವಿಷಲ್ ಕೂಗಿಸಿಕೊಳ್ಳಿ. ನಂತರ ಕುಕ್ಕರ್ ತಣ್ಣಗಾದ ಮೇಲೆ ಮಿಶ್ರಣದ ಹದ ನೋಡಿಕೊಂಡು ತುಸು ನೀರು ಸೇರಿಸಿಕೊಳ್ಳಿ. ಬೇಕಿದ್ದರೆ ½ ಟೀ ಸ್ಪೂನ್ ಸಕ್ಕರೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ 1 ಕಪ್ ಪನ್ನೀರ್ ತುಂಡುಗಳನ್ನು ಹಾಕಿ. ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿಕೊಳ್ಳಿ.