ಮಕ್ಕಳು ಮನೆಯಲ್ಲೆ ಇರುವುದರಿಂದ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದಿನಾ ಅಂಗಡಿಯ ತಿಂಡಿಗಳಾದ ಬಿಸ್ಕೇಟ್, ಕೇಕ್, ಚಾಕೋಲೇಟ್ಸ್ ಕೊಟ್ಟರೆ ಅವರ ಆರೋಗ್ಯವೂ ಹಾಳು. ಬೇರೆ ಏನಾದರೂ ಮಾಡುವುದಕ್ಕೆ ಸಮಯವಿಲ್ಲ ಎನ್ನುವವರಿಗೆ ಇಲ್ಲಿದೆ ನೋಡಿ ಒಂದು ಸೂಪರ್ ಸ್ನ್ಯಾಕ್ಸ್ ರೆಸಿಪಿ.
ಇದು ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಾಗ್ರಿ-1 ಕಪ್ ಕಡಲೇಬೀಜ, 2 ಟೇಬಲ್ ಸ್ಪೂನ್ ಬಿಳಿ ಎಳ್ಳು, ಕಾಲು ಕಪ್ ಬೆಲ್ಲ(ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳಬಹುದು). ಏಲಕ್ಕಿ ಪೌಡರ್ ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಕಡಲೇಬೀಜವನ್ನು ಚೆನ್ನಾಗಿ ಹುರಿದುಕೊಳ್ಳಿ. ಅದರ ಸಿಪ್ಪೆಯನ್ನು ತೆಗೆದುಕೊಂಡು ಇಟ್ಟಿರಿ. ನಂತರ ಎಳ್ಳನ್ನು ತುಸು ಬಿಸಿ ಮಾಡಿಕೊಳ್ಳಿ. ಜಾಸ್ತಿ ಹೊತ್ತು ಹುರಿಯಬೇಡಿ. ಚಟಪಟ ಸದ್ದಾಗುವವರೆಗ ಹುರಿದರೆ ಸಾಕು. ಒಂದು ಮಿಕ್ಸಿ ಜಾರಿಗೆ ಕಡಲೇಬೀಜ ಹಾಕಿ ಪುಡಿ ಮಾಡಿಕೊಳ್ಳಿ.
ನಂತರ ಇದಕ್ಕೆ ಬೆಲ್ಲ ಹಾಕಿ ಒಟ್ಟು ಸೇರಿಸಿ ಪುಡಿ ಮಾಡಿ. ಕೊನೆಗೆ ಎಳ್ಳು ಹಾಕಿ ಒಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿ ಏಲಕ್ಕಿ ಪುಡಿ ಹಾಕಿ. ಬೇಕಿದ್ದರೆ ಒಂದು ಚಮಚ ತುಪ್ಪ ಸೇರಿಸಿ ಚಿಕ್ಕದಾಗಿ ಉಂಡೆ ಕಟ್ಟಿ 4 ದಿನ ಕೆಡದಂತೆ ಇಡಬಹುದು. ಮಾಡುವುದಕ್ಕೂ ಸುಲಭ, ಆರೋಗ್ಯಕರವಾದ್ದರಿಂದ ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ.