ಸ್ವಲ್ಪ ತಲೆನೋವು ಅಥವಾ ಟೆನ್ಷನ್ ಎನಿಸಿದರೆ ಕಪ್ ಗಳ ಮೇಲೆ ಕಪ್ ಚಹಾ ಹೀರುತ್ತೇವೆ ಅಥವಾ ಕಾಫಿ ಕುಡಿಯುತ್ತೇವೆ. ದಿನದಲ್ಲಿ ಹೆಚ್ಚು ಬಾರಿ ಇವುಗಳನ್ನು ಸೇವಿಸುತ್ತಿದ್ದರೆ, ಸಮಸ್ಯೆಗಳು ಉಂಟಾಗುವ ಅವಕಾಶ ಹೆಚ್ಚು. ಬದಲಾಗಿ ಹರ್ಬಲ್ ಟೀಗಳ ಅನೇಕ ಫ್ಲೇವರ್ ಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಂಡರೆ ಆರೋಗ್ಯಕ್ಕೆ ಉತ್ತಮ.
ಎಲೆ
ತುಳಸಿ, ಲೆಮನ್, ಪುದೀನಗಳಿಂದ ಮಾಡಿದ ಟೀಗಳು ಸಾಮಾನ್ಯ ಟೀಗಳಿಗಿಂತ ಉತ್ತಮ. ಇವುಗಳಲ್ಲಿನ ಸಿ ವಿಟಮಿನ್ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಮೆದುಳಿನ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಈ ಟೀ ಜೊತೆ ಶುಂಠಿ, ಜೇನುತುಪ್ಪ ಸೇರಿಸಿದರೆ ಮತ್ತಷ್ಟು ರುಚಿಯಾಗಿರುತ್ತದೆ.
ಸುಗಂಧದ್ರವ್ಯ
ಶುಂಠಿ, ಏಲಕ್ಕಿ, ದಾಲ್ಚಿನ್ನಿ ಚಕ್ಕೆಯಿಂದ ಮಾಡುವ ಟೀ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ದಾಲ್ಚಿನ್ನಿ ಚಕ್ಕೆಯಿಂದ ಮಾಡಿದ ಟೀ ಕುಡಿದರೆ ಮಧುಮೇಹ ಹತೋಟಿಯಲ್ಲಿರುತ್ತದೆ. ದೇಹದಲ್ಲಿ ರಕ್ತ ಪ್ರಸರಣ ಸರಾಗವಾಗಿ ಸಾಗುತ್ತದೆ. ಏಲಕ್ಕಿಗೆ ಹೊಟ್ಟೆ ನೋವು ಹಾಗೂ ಬಾಯಿ ದುರ್ವಾಸನೆ ನಿಯಂತ್ರಿಸುವ ಶಕ್ತಿ ಇದೆ. ಮುಖ್ಯವಾಗಿ ಮುಟ್ಟಾದ ವೇಳೆಯಲ್ಲಿ ಉಗುರು ಬೆಚ್ಚಗಿನ ಈ ಟೀ ಕುಡಿಯುವುದರಿಂದ ಹೊಟ್ಟೆನೋವು ನಿಯಂತ್ರಣಕ್ಕೆ ಬರುತ್ತದೆ.
ಹೂವು
ಸೇವಂತಿಗೆ, ಮಲ್ಲಿಗೆ, ಗುಲಾಬಿಯಂತಹ ಹೂಗಳ ಫ್ಲೋರಲ್ ಟೀಗಳು ಲಭ್ಯವಿವೆ. ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪ, ಏಲಕ್ಕಿ ಬೆರೆಸಿ ಇದನ್ನು ಕುಡಿದರೆ ಒಳ್ಳೆಯ ಸುವಾಸನೆ ಹಾಗೂ ಆರೋಗ್ಯ ಪಡೆಯಬಹುದು. ಇವು ಒತ್ತಡವನ್ನು ದೂರ ಮಾಡುತ್ತದೆ. ಸರಿಯಾದ ನಿದ್ರೆ ತರಿಸುತ್ತದೆ. ಜೀವ ಕ್ರಿಯೆಗಳ ಕೆಲಸವನ್ನು ಕೂಡ ಹೆಚ್ಚಿಸುತ್ತದೆ.