ಕಾರಿನಲ್ಲಿ ಕುಳಿತರೆ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿರುವ ಅನುಭವ! ಆರಾಮದಾಯಕ ಮಸಾಜ್ ಸೀಟ್ಗಳು, ದೊಡ್ಡದಾದ ಟಚ್ಸ್ಕ್ರೀನ್ಗಳು, ಪ್ರೀಮಿಯಂ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್ರೂಫ್ ಸೇರಿದಂತೆ ಹತ್ತಾರು ಐಷಾರಾಮಿ ಸೌಲಭ್ಯಗಳು. ಇಂತಹ ಕಾರಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಕಾರು ಪ್ರಿಯರಿಗೆ ಇಂತಹದ್ದೇ ಐಷಾರಾಮಿ ಅನುಭವ ನೀಡಲು ಚೀನಾದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ BYD ಸಜ್ಜಾಗಿದೆ.
ಕಂಪನಿಯ ಐಷಾರಾಮಿ ಕಾರು ಬ್ರ್ಯಾಂಡ್ Denza ಇಂದು (ನವೆಂಬರ್ 13) ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಇದರೊಂದಿಗೆ D9 ಮತ್ತು Z9 GT ಎಂಬ ಎರಡು ದುಬಾರಿ ಪ್ರೀಮಿಯಂ ಕಾರುಗಳು ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
7 ಜನರ ಪ್ರಯಾಣಕ್ಕೂ ಐಷಾರಾಮಿ ಫೀಲ್ ನೀಡುವ Denza D9!
ಕುಟುಂಬದೊಂದಿಗೆ ದೂರದ ಪ್ರಯಾಣ ಮಾಡುವಾಗ ಹಿಂಬದಿ ಸೀಟಿನಲ್ಲಿ ಕುಳಿತು ಆರಾಮವಾಗಿ ಪ್ರಯಾಣಿಸಬೇಕು ಎಂಬ ಆಸೆ ಹಲವರಿಗಿರುತ್ತದೆ. ಅಂತಹವರಿಗೆ Denza D9 ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.
ಇದು 2+2+3 ಆಸನ ವಿನ್ಯಾಸ ಹೊಂದಿರುವ ಏಳು ಸೀಟರ್ ಐಷಾರಾಮಿ ಎಂಪಿವಿ. ವಿಶೇಷವಾಗಿ ಎರಡನೇ ಸಾಲಿನ ಕ್ಯಾಪ್ಟನ್ ಸೀಟ್ಗಳು ಪ್ರಯಾಣಿಕರ ಗಮನ ಸೆಳೆಯುತ್ತವೆ. ಈ ಆಸನಗಳಲ್ಲಿ ವಿದ್ಯುತ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವ ಸೌಲಭ್ಯದ ಜೊತೆಗೆ ಹೀಟಿಂಗ್, ವೆಂಟಿಲೇಷನ್ ಮತ್ತು ಮಸಾಜ್ ವ್ಯವಸ್ಥೆಯೂ ಇದೆ.
ಅಂದರೆ, ಕಾರಿನಲ್ಲೇ ಕುಳಿತು ಆರಾಮವಾಗಿ ಮಸಾಜ್ ಸೌಲಭ್ಯ ಪಡೆಯಬಹುದು. ಹಿಂಬದಿ ಪ್ರಯಾಣಿಕರಿಗಾಗಿ ಪ್ರತ್ಯೇಕ ಟಚ್ಸ್ಕ್ರೀನ್ ನಿಯಂತ್ರಣ ಮತ್ತು ಮನರಂಜನಾ ಪರದೆಗಳನ್ನೂ ನೀಡಲಾಗಿದೆ.
Denza D9ನ ಪ್ರಮುಖ ಫೀಚರ್ಸ್ಗಳು:
-
15.6 ಇಂಚಿನ ದೊಡ್ಡ ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್
-
10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ
-
14 ಸ್ಪೀಕರ್ಗಳ Dynaudio ಸೌಂಡ್ ಸಿಸ್ಟಮ್
-
ಪನೋರಮಿಕ್ ಸನ್ರೂಫ್
-
ಮೂರು ವಲಯಗಳ ಕ್ಲೈಮೇಟ್ ಕಂಟ್ರೋಲ್
-
ADAS ಸುರಕ್ಷತಾ ತಂತ್ರಜ್ಞಾನ
-
360 ಡಿಗ್ರಿ ಕ್ಯಾಮೆರಾ
-
ಪವರ್ ಸ್ಲೈಡಿಂಗ್ ಡೋರ್ಗಳು
ಕೇವಲ 2.7 ಸೆಕೆಂಡ್ನಲ್ಲಿ 100 ಕಿ.ಮೀ. ವೇಗ!
ಇನ್ನೊಂದೆಡೆ ವೇಗದ ಕಾರುಗಳನ್ನು ಇಷ್ಟಪಡುವವರಿಗೆ Denza Z9 GT ಪ್ರಮುಖ ಆಕರ್ಷಣೆಯಾಗಲಿದೆ. ನೋಡಲು ಸ್ಪೋರ್ಟ್ಸ್ ಕಾರಿನಂತೆ ಕಾಣುವ ಈ ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಕ್ತಿಶಾಲಿ ಮೋಟಾರ್ಗಳನ್ನು ಹೊಂದಿದೆ.ಇದರಲ್ಲಿ 122.5 kWh ಬ್ಯಾಟರಿ ಹಾಗೂ ಮೂರು ಎಲೆಕ್ಟ್ರಿಕ್ ಮೋಟಾರ್ಗಳ ವ್ಯವಸ್ಥೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೋಟಾರ್ಗಳು ಒಟ್ಟಾಗಿ ಬರೋಬ್ಬರಿ 1,156 HP ಶಕ್ತಿ ಮತ್ತು 1,200 Nm ಟಾರ್ಕ್ ಉತ್ಪಾದಿಸುತ್ತವೆ.
ಕಂಪನಿಯ ಅಂತರರಾಷ್ಟ್ರೀಯ ಮಾರುಕಟ್ಟೆಯ ಮಾಹಿತಿಯ ಪ್ರಕಾರ, ಈ ಕಾರು ಕೇವಲ 2.7 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 270 ಕಿ.ಮೀ. ಆಗಿದೆ.
ಇದರಲ್ಲಿರುವ ‘Crab Walk’ ತಂತ್ರಜ್ಞಾನ ಮತ್ತೊಂದು ವಿಶೇಷತೆ. ಈ ಸೌಲಭ್ಯದ ಮೂಲಕ ಕಾರು ಪಕ್ಕಕ್ಕೆ ಚಲಿಸಬಹುದು. ಅಷ್ಟೇ ಅಲ್ಲ, ನಿಂತ ಸ್ಥಳದಲ್ಲೇ 360 ಡಿಗ್ರಿ ತಿರುಗುವ ಸಾಮರ್ಥ್ಯವನ್ನೂ ಹೊಂದಿದೆ.
ಕಾರಿನೊಳಗೆ ಸಿನಿಮಾ ಥಿಯೇಟರ್ನಂತಹ ಅನುಭವ!
Z9 GT ಕಾರಿನ ಒಳಾಂಗಣವೂ ಸಾಕಷ್ಟು ಆಕರ್ಷಕವಾಗಿದೆ. ಚಾಲಕನಿಗೆ ಮಾತ್ರವಲ್ಲದೆ ಪ್ರಯಾಣಿಕರಿಗೂ ಅತ್ಯಾಧುನಿಕ ಡಿಜಿಟಲ್ ಅನುಭವ ನೀಡುವ ರೀತಿಯಲ್ಲಿ ಕ್ಯಾಬಿನ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 17.3 ಇಂಚಿನ ಸೆಂಟ್ರಲ್ ಟಚ್ಸ್ಕ್ರೀನ್, 13.2 ಇಂಚಿನ ಡಿಜಿಟಲ್ ಡಿಸ್ಪ್ಲೇ ಮತ್ತು ಪ್ರಯಾಣಿಕರಿಗಾಗಿ ಪ್ರತ್ಯೇಕ 13.2 ಇಂಚಿನ ಸ್ಕ್ರೀನ್ ಇದೆ.
ಇದರ ಜೊತೆಗೆ ಮಸಾಜ್ ಸೌಲಭ್ಯವಿರುವ ಆಸನಗಳು, ನಾಲ್ಕು ವಲಯಗಳ ಕ್ಲೈಮೇಟ್ ಕಂಟ್ರೋಲ್, ಆಗ್ಮೆಂಟೆಡ್ ರಿಯಾಲಿಟಿ ಹೆಡ್ಅಪ್ ಡಿಸ್ಪ್ಲೇ ಹಾಗೂ 20 ಸ್ಪೀಕರ್ಗಳ Devialet ಸೌಂಡ್ ಸಿಸ್ಟಮ್ ನೀಡಲಾಗಿದೆ.
₹90 ಲಕ್ಷದಿಂದ ₹1.5 ಕೋಟಿ ಬೆಲೆ ನಿರೀಕ್ಷೆ!
ಈ ಎರಡೂ ಕಾರುಗಳನ್ನು ವಿದೇಶದಲ್ಲಿ ತಯಾರಿಸಿ ಸಂಪೂರ್ಣವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುವ (CBU) ನಿರೀಕ್ಷೆಯಿದೆ. ಹೀಗಾಗಿ ಇವು ಐಷಾರಾಮಿ ಕಾರುಗಳ ವಿಭಾಗದಲ್ಲಿ ಸ್ಥಾನ ಪಡೆಯಲಿವೆ. ಭಾರತದಲ್ಲಿ Denza D9 ಕಾರಿನ ನಿರೀಕ್ಷಿತ ಎಕ್ಸ್ಶೋರೂಂ ಬೆಲೆ ಸುಮಾರು ₹90 ಲಕ್ಷ ಇರಬಹುದು. ಇನ್ನು Denza Z9 GT ಕಾರಿನ ಬೆಲೆ ₹1.2 ಕೋಟಿಯಿಂದ ₹1.5 ಕೋಟಿ ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.
Denza D9 ಭಾರತದಲ್ಲಿ MG M9 ಮತ್ತು Toyota Vellfire ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಆದರೆ Z9 GTಗೆ ಸದ್ಯ ದೇಶದಲ್ಲಿ ನೇರ ಪ್ರತಿಸ್ಪರ್ಧಿ ಇಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ, ಸಾಮಾನ್ಯ ಕಾರು ಪ್ರಯಾಣಕ್ಕಿಂತಲೂ ವಿಭಿನ್ನವಾದ ಐಷಾರಾಮಿ ಅನುಭವ ನೀಡುವ ಗುರಿಯೊಂದಿಗೆ BYD ತನ್ನ Denza ಬ್ರ್ಯಾಂಡ್ ಅನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಕುಟುಂಬದೊಂದಿಗೆ ಆರಾಮದಾಯಕ ಪ್ರಯಾಣ ಬಯಸುವವರಿಗೆ D9, ವೇಗ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಷ್ಟಪಡುವವರಿಗೆ Z9 GT ಆಕರ್ಷಣೆಯಾಗಬಹುದು. ಈ ಎರಡೂ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟರಮಟ್ಟಿಗೆ ಬೇಡಿಕೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸೂಚನೆ: ಬೆಲೆ ಮತ್ತು ತಾಂತ್ರಿಕ ವಿವರಗಳು ಬಿಡುಗಡೆಗೂ ಮುನ್ನ ಲಭ್ಯವಿರುವ ನಿರೀಕ್ಷಿತ ಮಾಹಿತಿಯನ್ನು ಆಧರಿಸಿವೆ. ಅಧಿಕೃತ ಬಿಡುಗಡೆ ವೇಳೆ ಬದಲಾವಣೆಗಳಿರಬಹುದು.

