ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿರಿಯ ಆಟಗಾರ ರೋಹಿತ್ ಶರ್ಮಾ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಮೂವತ್ತೊಂಬತ್ತು ವರ್ಷದ ರೋಹಿತ್ ಶರ್ಮಾ ಕವರ್ಸ್ ವಿಭಾಗದಲ್ಲಿ ಚಿರತೆಯಂತೆ ಜಿಗಿದು ಹಿಡಿದ ರೋಚಕ ಕ್ಯಾಚ್ ಗೆ ಕಿವೀಸ್ ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಪೆವಿಲಿಯನ್ ಹಾದಿ ಹಿಡಿದಿದ್ದಾರೆ.
ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದ ವೇಳೆ ಅಪಾಯಕಾರಿಯಾಗುತ್ತಿದ್ದ ಫಿನ್ ಅಲೆನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ ಚೆಂಡು ಕವರ್ಸ್ ದಿಕ್ಕಿನತ್ತ ಚಿಮ್ಮಿತು. ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿ ತಮ್ಮ ಬಲಭಾಗಕ್ಕೆ ಪೂರ್ಣವಾಗಿ ಡೈವ್ ಮಾಡುವ ಮೂಲಕ ಚೆಂಡನ್ನು ಅಮೋಘವಾಗಿ ಹಿಡಿದರು. ಈ ಅನಿರೀಕ್ಷಿತ ಹಾಗೂ ಚುರುಕಿನ ಕ್ಯಾಚ್ ಕಂಡು ಸಹ ಆಟಗಾರರು ಸಂಭ್ರಮಿಸಿದರೆ, ಭಾರತಕ್ಕೆ ಮಹತ್ವದ ವಿಕೆಟ್ ಲಭಿಸಿತು.
ಸಾಮಾನ್ಯವಾಗಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುವ ರೋಹಿತ್ ಶರ್ಮಾ, ಈ ವಯಸ್ಸಿನಲ್ಲೂ ತೋರಿದ ಫಿಟ್ನೆಸ್ ಮತ್ತು ಚುರುಕುತನಕ್ಕೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎಂಬುದನ್ನು ಹಿಟ್ ಮ್ಯಾನ್ ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಅದ್ಭುತ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ತಂಡ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿದೆ. ಹ್ಯಾಮಿಲ್ಟನ್ ನಲ್ಲಿ ನಡೆಯಬೇಕಿದ್ದ ಮೂರನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದೆ.

