ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನವದೆಹಲಿ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನವೆಂಬರ್ 16 ಮತ್ತು 17ರಂದು ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಎರಡು ದಿನಗಳ ಮಾದರಿ ಬ್ರಿಕ್ಸ್ ಶೃಂಗಸಭೆ-2026 ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಹೇಳಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಲ್‍ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಾದರಿ ಬ್ರಿಕ್ಸ್ ಶೃಂಗಸಭೆ-2026 ಆಯೋಜನೆ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಭಾರತದ ಅಧ್ಯಕ್ಷತೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜನರಿಂದ ಜನರಿಗೆ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಜನಭಾಗಿದಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಮಾದರಿ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬ್ರಿಕ್ಸ್ ಸಂಘಟನೆಯ ಕಾರ್ಯವೈಖರಿ, ಅಂತರರಾಷ್ಟ್ರೀಯ ಸಂಬಂಧಗಳು, ಜಾಗತಿಕ ಆಡಳಿತ ವ್ಯವಸ್ಥೆ, ಬಹುಪಕ್ಷೀಯ ಸಹಕಾರ ಹಾಗೂ ಸಮಕಾಲೀನ ಜಾಗತಿಕ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಆಳವಾದ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ರಾಜತಾಂತ್ರಿಕ ಸಂವಾದ, ನಾಯಕತ್ವ ಗುಣಗಳು, ಮಾತುಕತೆ ಕೌಶಲ್ಯ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತದ ಪಾತ್ರದ ಕುರಿತು ಪ್ರಾಯೋಗಿಕ ಜ್ಞಾನ ಒದಗಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಬ್ರಿಕ್ಸ್ ಮೂಲತಃ 11 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಜಾಗತಿಕ ಸಂಘಟನೆಯಾಗಿದ್ದು, 10 ಪಾಲುದಾರ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಮಾದರಿ ಬ್ರಿಕ್ಸ್ ಶೃಂಗಸಭೆ ಆಯೋಜಿಸಲಾಗುತ್ತಿದೆ. ಈ ಮಹತ್ವದ ಅವಕಾಶವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಲ್ಪಿಸಿದೆ ಎಂದು ಅವರು ತಿಳಿಸಿದರು.
ನವೆಂಬರ್ 16 ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯಾಸೌಧದ ಸೆನೆಟ್ ಹಾಲ್‍ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎಂಇಆರ್ ಮತ್ತು ಜಿ20) ಹಾಗೂ ಭಾರತದ ಬ್ರಿಕ್ಸ್ ಸಹ-ಶೆರ್ಪಾ ಶ್ರೀ ಶಂಭು ಎಲ್. ಹಕ್ಕಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಚಿವಾಲಯದ ಎಂಇಆರ್ ಮತ್ತು ಜಿ20 ವಿಭಾಗ ಹಾಗೂ ಬ್ರಿಕ್ಸ್ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಶಿಬಾಂಕ ದಾಸ್ ಬಿಸ್ವಾಸ್, ಮಲ್ಟಿಲ್ಯಾಟರಲ್ ಎಕನಾಮಿಕ್ ರಿಲೇಶನ್ಸ್ (ಎಂಇಆರ್ ಮತ್ತು ಜಿ20) ಹಾಗೂ ಅಂಗದ್ ಸಿಂಗ್ ಬ್ರಾರ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಗಳಾಗಿ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ.ಎಂ.ರತ್ನಾಕರ್ ಕಾರ್ಯನಿರ್ವಹಿಸಲಿದ್ದು, ವಿಭಾಗದ ಮುಖ್ಯಸ್ಥ ಪ್ರೊ. ಎಂ. ಯರಿಸ್ವಾಮಿ ಉಪಸ್ಥಿತರಿರುವರು.
ನವೆಂಬರ್ 17 ರಂದು ಮಧ್ಯಾಹ್ನ 3.35 ರಿಂದ 4.25 ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕುಲಪತಿ ಪ್ರೊ ಎ.ಎಂ. ಖಾನ್ ಅವರು ಸಮಾರೋಪದ ಕುರಿತು ಮಾತನಾಡಲಿದ್ದು, ಶಂಭು ಎಲ್. ಹಕ್ಕಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ರಾಜತಾಂತ್ರಿಕತೆ, ಬಹುಪಕ್ಷೀಯ ಸಂಸ್ಥೆಗಳ ಕಾರ್ಯವೈಖರಿ ಹಾಗೂ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಸಂಘಟನೆಯ ಮಹತ್ವ ಮತ್ತು ಭಾರತದ ಪಾತ್ರವನ್ನು ಅರಿತುಕೊಳ್ಳಲು ಈ ಶೃಂಗಸಭೆ ಉತ್ತಮ ಅವಕಾಶ ಕಲ್ಪಿಸಲಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬೋಧಕ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ ಎಂದು ಅವರು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ 71 ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 2025-2026 ನೇ ಸಾಲಿನ ‘ಅರಿವೇ ಗುರು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತೆ ಹಾಸನದ ಬಾನು ಮುಷ್ತಾಕ್ ಅವರು ಭಾಗವಹಿಸಲಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಸಮಾರಂಭವು ನವೆಂಬರ್ 19, 2026ರಂದು ಬೆಳಿಗ್ಗೆ 11:30ಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ.ವಿ.ವಿ ಪತ್ರಿಕೋದ್ಯಮ ಮುಖ್ಯಸ್ಥರಾದ ಜೆ.ಎಂ.ಚಂದುನವರ ಸೇರಿದಂತೆ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

