HomeKarnatakaಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಳಿ

ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಳಿ

ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಹಾರ, ಮೆಟ್ರೋ ಯೋಜನೆಗೆ ಕೇಂದ್ರದ ಅನುದಾನ ಹಾಗೂ ರಾಜ್ಯದ ತೆರಿಗೆ ಪಾಲು ಸೇರಿದಂತೆ ಹಲವು ವಿಚಾರಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ–ಎಸ್‌ಟಿ ಶಾಸಕರ ಸಭೆ ಕುರಿತು ಪ್ರತಿಕ್ರಿಯಿಸಿ, ಪರಿಷತ್‌ಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಮುಖ್ಯಮಂತ್ರಿ ಸಲಹೆ ಹಾಗೂ ಸೂಚನೆಗಳನ್ನು ಕೇಳುತ್ತಿದ್ದಾರೆ. ಮುಂದಿನ ಮಾರ್ಚ್‌ನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಈಗಿನಿಂದಲೇ ಚರ್ಚೆ ನಡೆಸಲಾಗುತ್ತಿದೆ. ಬಜೆಟ್‌ ಹಂಚಿಕೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿ ಆರಂಭಿಸುವ ಉದ್ದೇಶದಿಂದ ಹಾಗೂ ಸಮುದಾಯಗಳ ಹಿತದೃಷ್ಟಿಯಿಂದ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇರಳ ಭಾಷಣದ ಬಗ್ಗೆ ದೂರು

ಕೇರಳದಲ್ಲಿ ತಾವು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿರುವ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ನಾನು RSSನ ಸದಸ್ಯ ಎಂದು ಹೇಳುತ್ತಿದ್ದಾರಲ್ಲ, ಸದಸ್ಯತ್ವ ಕಾರ್ಡ್ ಕೊಡಲಿ. ಸದಸ್ಯತ್ವ ಇರಬೇಕಲ್ಲವೇ?” ಎಂದು ವ್ಯಂಗ್ಯವಾಡಿದರು. ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬರ ಪರಿಹಾರದ ಹಣ ಕಡಿಮೆ ಜಮೆಯಾಗಿರುವ ಬಗ್ಗೆ

ರೈತರಿಗೆ ನೀಡಲಾಗುತ್ತಿರುವ ಬರ ಪರಿಹಾರದ ಹಣ ಖಾತೆಗೆ ಕಡಿಮೆ ಪ್ರಮಾಣದಲ್ಲಿ ಜಮೆಯಾಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಯಾವುದೇ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಲಾಗುವುದು. ದೀಪಾವಳಿ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವು ತೊಂದರೆಗಳಾಗಿದ್ದವು ಎಂಬ ಮಾಹಿತಿ ಬಂದಿದೆ. ಅಂತಹ ಸಮಸ್ಯೆಗಳಿದ್ದರೆ ಸರಿಪಡಿಸಲಾಗುವುದು. “ನಮಗೆ DBT ಮೂಲಕ ಹಣ ಹಾಕುವ ಅಭ್ಯಾಸ ಇದೆ. We will do it” ಎಂದು ಹೇಳಿದರು.

ಬಿಜೆಪಿ ಆರೋಪಕ್ಕೆ ತಿರುಗೇಟು

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರ ಹೇಳಿಕೆ ಅರ್ಥವಾಗುತ್ತಿಲ್ಲ ಎಂದರು.

ಹಾಲಿನ ದರ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲಿ, ಆದರೆ ಮಹಾರಾಷ್ಟ್ರದಲ್ಲಿ ಅಮೂಲ್ ಹಾಲಿನ ದರ ಏರಿಕೆಯಾದಾಗ ಬಿಜೆಪಿ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಕಳೆದ 13 ವರ್ಷಗಳಲ್ಲಿ ನಡೆದ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳ ಬಗ್ಗೆ ಬಿಜೆಪಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮೋದಿ ಅವರ ವಿಚಾರದಲ್ಲಿ ಬಿಜೆಪಿ ನಾಯಕರು ಯಾವುದೇ ಟೀಕೆ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, “ಮೋದಿ ಮಹಾನ್ ಅಂತಾರೆ. ಜೀವ ಹೋದರೂ ಪರವಾಗಿಲ್ಲ, ಮೋದಿ ಹೇತೋ ಮುಮ್ಕಿನ್ ಅಂತ ಹೇಳೇ ಸಾಯೋದು ಇವರು” ಎಂದು ಕಿಡಿಕಾರಿದರು.

ಮೋದಿ ಭೇಟಿಗೂ ಮುನ್ನ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಮೋದಿ ಬಂದು ಏನು ಮಾಡುತ್ತಾರೆ?” ಎಂದು ಪ್ರಶ್ನಿಸಿದರು.

ಪ್ರಧಾನಿ ಅವರು ಟೆಲಿಪ್ರಾಂಪ್ಟರ್‌ನಲ್ಲಿ ಬರುವುದನ್ನು ಓದಿ, ಕನ್ನಡದಲ್ಲಿ ಒಂದೆರಡು ಸಾಲು ನಮಸ್ಕಾರ ಹಾಗೂ ಶುಭಾಶಯಗಳನ್ನು ಹೇಳುತ್ತಾರೆ. ಅದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ ಎಂದು ಟೀಕಿಸಿದರು.

ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರದ ಕೊಡುಗೆ ಮತ್ತು ರಾಜ್ಯದ ಪಾಲಿನ ಬಗ್ಗೆ ನಿನ್ನೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಮೆಟ್ರೋ ಯೋಜನೆಗೆ ರಾಜ್ಯವೇ ಶೇ.80ರಷ್ಟು ಅನುದಾನ ನೀಡುತ್ತಿದೆ. ಕೇಂದ್ರ ನೀಡುವ ಶೇ.15–16ರಷ್ಟು ಪಾಲನ್ನು ದೊಡ್ಡ ಸಾಧನೆಯಂತೆ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ ತೆರಿಗೆ, ಐಟಿ ರಫ್ತು ಮತ್ತು ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳಿಂದ ಲಾಭ ಪಡೆಯಲು ಕೇಂದ್ರಕ್ಕೆ ಆಸಕ್ತಿ ಇದೆ. ಆದರೆ ರಾಜ್ಯಕ್ಕೆ ತೆರಿಗೆ ಪಾಲು ನೀಡುವ ವಿಚಾರ ಬಂದಾಗ ಅನ್ಯಾಯವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

“ನನಗಂತೂ ಮೋದಿ ಅವರಿಂದ ಏನು ನಿರೀಕ್ಷೆಯಿಲ್ಲ. ಕನ್ನಡದಲ್ಲಿ ಒಂದೆರಡು ಸಾಲು ಭಾಷಣ ಮಾಡುತ್ತಾರೆ, ನಮ್ಮವರು ಚಪ್ಪಾಳೆ ಹೊಡೆಯುತ್ತಾರೆ. ಅದನ್ನೇ ಬಿಜೆಪಿಯವರು ರೀಲ್ಸ್ ಮಾಡಿ ಹತ್ತು ಬಾರಿ ಹಾಕುತ್ತಾರೆ. ಅದನ್ನು ಬಿಟ್ಟರೆ ಹತ್ತು ನಯಾ ಪೈಸೆಯ ಉಪಯೋಗ ಇಲ್ಲ” ಎಂದು ವಾಗ್ದಾಳಿ ನಡೆಸಿದರು.

ಬರ ಪರಿಹಾರ ಕುರಿತು ಮೋದಿ ಮುಂದೆ ಪ್ರಸ್ತಾಪ

ನಾಳೆ ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಪರಿಹಾರದ ವಿಚಾರವನ್ನು ಖಂಡಿತವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿ ನಾಯಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿಚಾರಗಳ ಬಗ್ಗೆ ಚರ್ಚಿಸುವುದರಲ್ಲೇ ತೊಡಗಿದ್ದಾರೆ. ಆದರೆ ರೈತರ ಕಣ್ಣೀರು ಒರೆಸಲು ಯಾರೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಜ್ಯ ಸರ್ಕಾರ ಪ್ರಸ್ತಾಪಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಮೆಟ್ರೋ ಯೋಜನೆಗೆ ಕೇಂದ್ರದ ಪಾಲು ಹೆಚ್ಚಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಈಗಾಗಲೇ ಅಂಕಿ-ಅಂಶಗಳನ್ನು ನೀಡಿದೆ. “ಅಂಕಿ-ಅಂಶಗಳ ಮೇಲೆ ಮಾತನಾಡಲಿ. ಗಾಳಿಯಲ್ಲಿ ಗುಂಡು ಹಾರಿಸಿದರೆ ಅದಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲ” ಎಂದರು. ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ, ಸಾಮಾಜಿಕ ಜಾಲತಾಣದಲ್ಲೂ ಎಲ್ಲ ದಾಖಲೆಗಳಿವೆ. ಬಿಜೆಪಿ ನಾಯಕರು ಅಧ್ಯಯನ ಮಾಡಿಕೊಂಡು ಬಂದು ಮಾತನಾಡಲಿ ಎಂದು ತಿರುಗೇಟು ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular