ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಬೇರೆ ಯಾರ ಮೇಲೂ ತಮಗೆ ಯಾವುದೇ ದ್ವೇಷಭಾವವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ತಿಳಿಸಿದರು. ಅಲ್ಲದೆ, ತಮ್ಮ ಕೆಲಸದ ಮೂಲಕ ಶಾಶ್ವತವಾದ ಛಾಪು ಮೂಡಿಸಲು ತಾವು ಬದ್ಧರಾಗಿರುವುದಾಗಿ ಅವರು ಹೇಳಿದರು.
“ನಾನು ಯಾರಿಗೂ ಹಾನಿ ಮಾಡಲು ಬಯಸುವುದಿಲ್ಲ, ಇದೇ ನನ್ನ ಬದ್ಧತೆಯಾಗಿರುತ್ತದೆ” ಎಂದು ಅವರು ನುಡಿದರು. ಮಾನಸಗಂಗೋತ್ರಿ ಆವರಣದಲ್ಲಿರುವ ಸೆನೆಟ್ ಭವನದಲ್ಲಿ, ಸಂಶೋಧಕಿ ರಮ್ಯಾ ಅವರು ತಮ್ಮ ಕುರಿತು ಬರೆದ ‘ಚಲಿಸುವ ಬಂಡೆ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ನಡೆದ ಹಲವು ರಾಜಕೀಯ ಬೆಳವಣಿಗೆಗಳನ್ನು ತಾವು ಹತ್ತಿರದಿಂದ ಕಂಡಿರುವುದಾಗಿ ಮತ್ತು ಅವುಗಳಲ್ಲಿ ಅನೇಕ ಘಟನೆಗಳಲ್ಲಿ ತಾವೂ ಭಾಗಿಯಾಗಿದ್ದಾಗಿ ಡಿ.ಕೆ. ಶಿವಕುಮಾರ್ ಹೇಳಿದರು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರಾವಧಿಗಳೂ ಸೇರಿವೆ ಎಂದು ಅವರು ಉಲ್ಲೇಖಿಸಿದರು.
ರಾಜಕೀಯವನ್ನು ಒಂದು ಸವಾಲಿನ ಪಯಣ ಎಂದು ಬಣ್ಣಿಸಿದ ಅವರು, ಅದರ ಅನಿಶ್ಚಿತತೆಗಳನ್ನು ಎದುರಿಸಿ ಗುರಿಯನ್ನು ತಲುಪಲು ಅಪಾರವಾದ ದೃಢತೆ ಮತ್ತು ಪರಿಶ್ರಮದ ಅಗತ್ಯವಿದೆ ಎಂದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡ ಅವರು, ತಾನು ಎಂದಿಗೂ ಅವರಿಗೆ ತೊಂದರೆ ನೀಡಲು ಅಥವಾ ಅವರ ಸರ್ಕಾರವನ್ನು ದುರ್ಬಲಗೊಳಿಸಲು ಉದ್ದೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಯಾವತ್ತೂ ಕೇಡು ಬಯಸಿಲ್ಲ. ಮುಂದೆಯೂ ಅವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಈ ಹಿಂದೆ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿಯೂ ಅವರಿಗೆ ಯಾವುದೇ ರೀತಿಯ ಕೇಡು ಬಯಸಿರಲಿಲ್ಲ ಎಂದು ಹೇಳಿದರು.
ನನ್ನ ಬದುಕು ತೆರೆದ ಪುಸ್ತಕವಿದ್ದಂತೆ. ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ನನ್ನ ಪಾತ್ರ ಏನಿತ್ತು ಎಂಬುದನ್ನು ಹೇಳುವುದಿದೆ. ಆದರೆ ಈಗ ಅದರ ಬಗ್ಗೆ ಮಾತನಾಡುವುದಿಲ್ಲ. ಮುಂದೆ ಯಾವುದಾದರೂ ಸಂದರ್ಭದಲ್ಲಿ ಆ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸುಮಾರು 35 ವರ್ಷಗಳ ಹಿಂದೆಯೇ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ನಾನು ಸುಮ್ಮನೆ ಬಂದು ಇಲ್ಲಿ ಕುಳಿತಿಲ್ಲ. ಸಾಕಷ್ಟು ನಾಯಕರನ್ನು ಬೆಳೆಸಿದ ಬಳಿಕ ಈ ಹಂತಕ್ಕೆ ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದೇನೆ ಎಂದು ಹೇಳಿದರು.
ಜೈಲಿನಲ್ಲಿದ್ದ ಸಂದರ್ಭದಲ್ಲಿಯೇ ನನ್ನ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗಬೇಕು ಎಂಬ ಆಲೋಚನೆ ಮಾಡಿದ್ದೆ. ನನ್ನನ್ನು ರಾಜಕೀಯವಾಗಿ ಹಲವು ರೀತಿಯಲ್ಲಿ ಟೀಕಿಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿರುವುದನ್ನು ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೂ ನಾನು ತಾಳ್ಮೆಯಿಂದ ಇದ್ದೇನೆ. ಯಾರಿಗೂ ಮೋಸ ಮಾಡಬೇಕು ಎಂಬ ಮನಸ್ಸು ನನಗಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರತಿಯೊಬ್ಬರ ಜೀವನದ ಅನುಭವಗಳು ದಾಖಲೆಯಾಗಬೇಕು. ಸಾಹಿತ್ಯ ಉಳಿಯಬೇಕಾದರೆ ಪುಸ್ತಕಗಳನ್ನು ಬರೆಯುವವರನ್ನು ನಾವು ಪ್ರೋತ್ಸಾಹಿಸಬೇಕು. ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ, ನಿಮ್ಮ ಪರಿಶ್ರಮದ ಮೇಲೆ ನಂಬಿಕೆ ಇಡಿ. ಇಂದು ನಾವು ಈ ಸ್ಥಾನಕ್ಕೆ ತಲುಪಲು ಅಪಾರ ಶ್ರಮಪಟ್ಟಿದ್ದೇವೆ. ಆರೋಗ್ಯ, ಕುಟುಂಬ ಹಾಗೂ ವೈಯಕ್ತಿಕ ಜೀವನವನ್ನೂ ಲೆಕ್ಕಿಸದೆ ಸಾಕಷ್ಟು ತ್ಯಾಗ ಮಾಡಿದ್ದೇವೆ. ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಮಾಡಬೇಕು, ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಸಚಿವ ಪಿ.ಎಂ. ನರೇಂದ್ರಸ್ವಾಮಿ, ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ, ಶಾಸಕರಾದ ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಜಿ.ಟಿ. ದೇವೇಗೌಡ, ಸಂಸದ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಎನ್.ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

