HomeIndiaಜನ ಸಾಮಾನ್ಯರಿಗೆ ಮತ್ತೊಂದು ಶಾಕ್! ಸರ್ಫ್ ಎಕ್ಸೆಲ್, ರಿನ್, ವೀಲ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ...

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್! ಸರ್ಫ್ ಎಕ್ಸೆಲ್, ರಿನ್, ವೀಲ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಭಾರಿ ಹೆಚ್ಚಳ

ತಿಂಗಳ ಆರಂಭದಲ್ಲಿ ದಿನಸಿ ಸಾಮಾನುಗಳ ಪಟ್ಟಿ ಸಿದ್ಧಪಡಿಸುವಾಗಲೇ ಯಾವ ವಸ್ತುವಿನ ಬೆಲೆ ಎಷ್ಟು ಹೆಚ್ಚಾಗಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗುವ ಗೃಹಿಣಿಯರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಅಡುಗೆ ಎಣ್ಣೆ, ಹಾಲು, ಸಕ್ಕರೆ, ಅಕ್ಕಿ, ತರಕಾರಿಗಳ ಬೆಲೆ ಏರಿಕೆಯಿಂದ ಈಗಾಗಲೇ ಮನೆಯ ಖರ್ಚು ನಿಭಾಯಿಸುವುದು ಕಷ್ಟವಾಗಿರುವಾಗ, ಬಟ್ಟೆ ತೊಳೆಯಲು ಬಳಸುವ ಡಿಟರ್ಜೆಂಟ್ ಮತ್ತು ಸ್ನಾನಕ್ಕೆ ಬಳಸುವ ಸಾಬೂನುಗಳ ಬೆಲೆಯೂ ಹೆಚ್ಚಳವಾಗಿದೆ. ಇದರಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್‌ಗೆ ಮತ್ತಷ್ಟು ಹೊರೆ ಬೀಳಲಿದೆ.

ದೇಶದ ಪ್ರಮುಖ ಎಫ್‌ಎಂಸಿಜಿ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ತನ್ನ ಹಲವು ಜನಪ್ರಿಯ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. ಸರ್ಫ್ ಎಕ್ಸೆಲ್, ರಿನ್ ಸೇರಿದಂತೆ ಹಲವು ಉತ್ಪನ್ನಗಳ ದರವನ್ನು ಶೇ.11ರವರೆಗೆ ಏರಿಕೆ ಮಾಡಲಾಗಿದ್ದು, ಹೊಸ ದರಗಳು ಈಗಾಗಲೇ ಜಾರಿಗೆ ಬಂದಿವೆ.

ಬಟ್ಟೆ ತೊಳೆಯುವುದಕ್ಕೂ ಇನ್ಮುಂದೆ ಹೆಚ್ಚು ಹಣ!

ಮನೆಗಳಲ್ಲಿ ಪ್ರತಿನಿತ್ಯ ಬಳಕೆಯಾಗುವ ಸರ್ಫ್ ಎಕ್ಸೆಲ್ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಅದರಲ್ಲೂ ದೊಡ್ಡ ಪ್ಯಾಕೆಟ್‌ಗಳನ್ನು ಖರೀದಿಸುವ ಕುಟುಂಬಗಳಿಗೆ ಹೆಚ್ಚುವರಿ ಹಣ ಪಾವತಿಸುವ ಅನಿವಾರ್ಯತೆ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಸರ್ಫ್ ಎಕ್ಸೆಲ್ ಕ್ವಿಕ್ ವಾಶ್ (1 ಕೆ.ಜಿ.): ₹235ರಿಂದ ₹245ಕ್ಕೆ ಏರಿಕೆ. ₹10 ಹೆಚ್ಚಳ.

  • ಸರ್ಫ್ ಎಕ್ಸೆಲ್ ಕ್ವಿಕ್ ವಾಶ್ (500 ಗ್ರಾಂ): ₹5 ಹೆಚ್ಚಳ.

  • ಸರ್ಫ್ ಎಕ್ಸೆಲ್ ಈಸಿ ವಾಶ್ (1 ಕೆ.ಜಿ.): ₹5 ಹೆಚ್ಚಳವಾಗಿ ₹172ಕ್ಕೆ ತಲುಪಿದೆ.

  • ಸರ್ಫ್ ಎಕ್ಸೆಲ್ ಈಸಿ ವಾಶ್ (500 ಗ್ರಾಂ): ₹85ರಿಂದ ₹87ಕ್ಕೆ ಏರಿಕೆ.

  • ಸರ್ಫ್ ಎಕ್ಸೆಲ್ ಬಾರ್ (250 ಗ್ರಾಂ): ₹3 ಹೆಚ್ಚಳವಾಗಿ ₹45ಕ್ಕೆ ತಲುಪಿದೆ.

  • ಸರ್ಫ್ ಎಕ್ಸೆಲ್ 200 ಗ್ರಾಂನ ನಾಲ್ಕು ಬಾರ್‌ಗಳ ಪ್ಯಾಕ್: ₹10 ಹೆಚ್ಚಳವಾಗಿ ₹155ಕ್ಕೆ ತಲುಪಿದೆ.

ರಿನ್, ಮೋಟಿ ಸೋಪ್ ಖರೀದಿಗೂ ಹೆಚ್ಚುವರಿ ಹಣ!

ಸರ್ಫ್ ಎಕ್ಸೆಲ್ ಮಾತ್ರವಲ್ಲದೆ, ರಿನ್ ಡಿಟರ್ಜೆಂಟ್ ಹಾಗೂ ಮೋಟಿ ಗುಲಾಬ್ ಸೋಪ್ ಬೆಲೆಯೂ ಹೆಚ್ಚಳವಾಗಿದೆ. ಹೊಸ ದರಗಳ ವಿವರ ಇಲ್ಲಿದೆ.

  • ರಿನ್ ಅಲಾ (500 ಎಂಎಲ್): ₹5 ಹೆಚ್ಚಳವಾಗಿ ₹95ಕ್ಕೆ ತಲುಪಿದೆ.

  • ರಿನ್ ಡಿಟರ್ಜೆಂಟ್ ಪೌಡರ್ (1 ಕೆ.ಜಿ.): ₹3 ಹೆಚ್ಚಳವಾಗಿ ₹93ಕ್ಕೆ ತಲುಪಿದೆ.

  • ರಿನ್ ಡಿಟರ್ಜೆಂಟ್ (500 ಗ್ರಾಂ): ₹2 ಹೆಚ್ಚಳವಾಗಿ ₹47ಕ್ಕೆ ತಲುಪಿದೆ.

  • ಮೋಟಿ ಗುಲಾಬ್ ಸೋಪ್: ₹74ರಿಂದ ₹82ಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ₹8 ಹೆಚ್ಚಳವಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ಸಾಬೂನು ಮತ್ತು ಡಿಟರ್ಜೆಂಟ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಉತ್ಪನ್ನಗಳ ದರವನ್ನು ಹೆಚ್ಚಿಸಬೇಕಾಗಿದೆ ಎಂದು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ಸಿಇಒ ಪ್ರಿಯಾ ನಾಯರ್ ತಿಳಿಸಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕಂಪನಿಯ ಲಾಭದ ಪ್ರಮಾಣವನ್ನು ಕಾಪಾಡಿಕೊಳ್ಳಲು ಬೆಲೆ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇತರ ಕಂಪನಿಗಳೂ ಬೆಲೆ ಹೆಚ್ಚಿಸಲಿವೆಯೇ?

ಹಿಂದೂಸ್ತಾನ್ ಯೂನಿಲಿವರ್ ಬೆಲೆ ಹೆಚ್ಚಿಸಿರುವ ಬೆನ್ನಲ್ಲೇ, ಇತರ ಎಫ್‌ಎಂಸಿಜಿ ಕಂಪನಿಗಳೂ ತಮ್ಮ ಉತ್ಪನ್ನಗಳ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಚರ್ಚೆ ಶುರುವಾಗಿದೆ. ಒಂದು ಕಡೆ ದಿನಸಿ ಸಾಮಾನುಗಳ ಬೆಲೆ ಏರಿಕೆ, ಮತ್ತೊಂದು ಕಡೆ ಸೋಪು, ಡಿಟರ್ಜೆಂಟ್‌ಗಳ ದರ ಹೆಚ್ಚಳ. ಹೀಗೆ ಮನೆಯ ಪ್ರತಿಯೊಂದು ಸಣ್ಣ ಖರ್ಚಿನಲ್ಲೂ ಹಣ ಉಳಿಸುವ ಪ್ರಯತ್ನದಲ್ಲಿರುವ ಸಾಮಾನ್ಯ ಕುಟುಂಬಗಳಿಗೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟುವ ಆತಂಕ ಎದುರಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular