ಬಾಗ್ಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವ ವಿಚಾರದಲ್ಲಿ ಉಂಟಾದ ಜಗಳದ ನಂತರ, ರಾಷ್ಟ್ರಪತಿಗಳ ಅಂಗರಕ್ಷಕರಾಗಿ(President’s bodyguard) ಸೇವೆ ಸಲ್ಲಿಸುತ್ತಿರುವ 26 ವರ್ಷದ ಯೋಧನೊಬ್ಬನ ತಲೆಗೆ ಗುಂಡು ತಗುಲಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲ್ ಪುರ ಖದಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿವಿಯ ಹಿಂಭಾಗಕ್ಕೆ ತಗುಲಿದ ಗುಂಡು
ಸೌರಭ್ ತೋಮರ್ ಅವರ ಕಿವಿಯ ಹಿಂಭಾಗಕ್ಕೆ ಗುಂಡು ತಗುಲಿದೆ. ಆರೋಪಿಗಳು ಸೌರಭ್ ಅವರ ಹಿರಿಯ ಸಹೋದರ ವಿನೀತ್ ಅವರ ಮೇಲೂ ಕೋಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೌರಭ್ ತೋಮರ್ ಮತ್ತು ವಿನೀತ್ ಇಬ್ಬರನ್ನೂ ಮೀರತ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ಯೋಧನ ತಲೆಯಲ್ಲಿ ಸಿಲುಕಿದ್ದ ಗುಂಡನ್ನು ತೆಗೆಯಲು ಮೀರತ್ ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ(ICU) ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಅದೇ ಗ್ರಾಮದವರಾದ ಸೌರಭ್, 2021ರಲ್ಲಿ ಸಶಸ್ತ್ರ ಪಡೆಗೆ ಸೇರ್ಪಡೆಗೊಂಡಿದ್ದರು ಮತ್ತು ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ನಿಯೋಜನೆಗೊಂಡಿದ್ದಾರೆ. ದೀಪಾವಳಿ ಆಚರಿಸಲು ಅವರು ರಜೆಯ ಮೇಲೆ ತಮ್ಮ ಗ್ರಾಮಕ್ಕೆ ಬಂದಿದ್ದರು.
ಜಗಳಕ್ಕೆ ಕಾರಣವೇನು?
ಪೊಲೀಸ್ ದೂರಿನ(FIR) ಪ್ರಕಾರ, ನವೆಂಬರ್ 8 ರ ರಾತ್ರಿ 9 ಗಂಟೆ ಸುಮಾರಿಗೆ ಸೌರಭ್ ಮತ್ತು ಅವರ ಸಹೋದರರಾದ ವಿನೀತ್ ಹಾಗೂ ಮಿಂಟು ತಮ್ಮ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಧೀರಜ್ ಮತ್ತು ಆತನ ಸಹೋದರ ಮೋನು(ಅಲಿಯಾಸ್ ಪ್ರವೀಣ್) ಎಂಬ ಇಬ್ಬರು ಗ್ರಾಮಸ್ಥರು, ಸ್ಥಳೀಯವಾಗಿ ತಯಾರಿಸಿದ ಬಂದೂಕು(country-made pistol) ಮತ್ತು ಕೋಲುಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದಿದ್ದಾರೆ. ಈ ಎರಡು ಕುಟುಂಬಗಳ ನಡುವೆ ಮೊದಲೇ ವೈಮನಸ್ಸು ಇತ್ತು ಎಂದು ತಿಳಿದುಬಂದಿದೆ.
ಆರೋಪಿಗಳು ಸಹೋದರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಸೌರಭ್ ಮತ್ತು ವಿನೀತ್ ಇದನ್ನು ಪ್ರಶ್ನಿಸಿದಾಗ, ಧೀರಜ್ ಗುಂಡು ಹಾರಿಸಿದ್ದಾರೆ. ಗುಂಡು ಮೊದಲು ಗೋಡೆಗೆ ತಗುಲಿ, ನಂತರ ದಿಕ್ಕು ಬದಲಾಗಿ ಸೌರಭ್ ಅವರ ತಲೆಗೆ ಬಡಿದಿದೆ, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ, ಮೋನು ಕೋಲಿನಿಂದ ವಿನೀತ್ ಅವರ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹೋಗುವಾಗ ಅವರು ಸಹೋದರರಿಗೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸೌರಭ್ ಅವರ ಕುಟುಂಬ ಸದಸ್ಯರು ಅವರನ್ನು ಬರೋಟ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಅವರನ್ನು ಮೀರತ್ ಗೆ ಕಳುಹಿಸಲಾಯಿತು; ಮೀರತ್ ನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅವರ ತಲೆಯಲ್ಲಿದ್ದ ಗುಂಡನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ವಿನೀತ್ ಅವರನ್ನು ಕೂಡ ಮೀರತ್ ನ ಆಸ್ಪತ್ರೆಗೆ ದಾಖಲಿಸಲಾಯಿತು.
ಪೊಲೀಸರ ಹೇಳಿಕೆ
ಬಾಗ್ಪತ್ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ನವೆಂಬರ್ 8 ರ ರಾತ್ರಿ ಸುಮಾರು 9:45 ರ ಸುಮಾರಿಗೆ ರಾಮಾಲಾ ಪೊಲೀಸ್ ಠಾಣೆಗೆ ಈ ಘಟನೆಯ ಬಗ್ಗೆ ಮಾಹಿತಿ ಲಭ್ಯವಾಯಿತು. ಪೊಲೀಸರ ಮಾಹಿತಿ ಪ್ರಕಾರ, ಗೋಪಾಲ್ ಪುರ ಖದಾನಾ ಗ್ರಾಮದಲ್ಲಿ ಮೋನು ಅಲಿಯಾಸ್ ಪ್ರವೀಣ್ ಮತ್ತು ಧೀರಜ್ ಎಂಬ ಇಬ್ಬರು ಗ್ರಾಮಸ್ಥರು ಗುಂಡು ಹಾರಿಸಿದ್ದಾರೆ. ಗೋಡೆಗೆ ತಗುಲಿ ದಿಕ್ಕು ಬದಲಿಸಿದ ಗುಂಡೊಂದು ಸೌರಭ್ ಅವರಿಗೆ ಬಡಿದಿದೆ. ಸೌರಭ್ ಅವರು ರಾಷ್ಟ್ರಪತಿ ಭವನದ ಭದ್ರತಾ ಸಿಬ್ಬಂದಿ ತಂಡದ ಸದಸ್ಯರಾಗಿದ್ದಾರೆ. ಅವರ ಸಹೋದರ ವಿನೀತ್ ಕೂಡ ತಲೆಯ ಮೇಲೆ ಕೋಲಿನಿಂದ ಹೊಡೆತ ಬಿದ್ದಿದ್ದರಿಂದ ಗಾಯಗೊಂಡಿದ್ದಾರೆ.
ಬಾಧಿತರ ತಂದೆ ಜನಕ್ ರಾಜ್ ನೀಡಿದ ದೂರಿನ ಆಧಾರದ ಮೇಲೆ ರಾಮಾಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ.
ಸ್ಥಳೀಯ ಎಸ್.ಎಚ್.ಒ (SHO) ಅವರು ತಿಳಿಸಿದಂತೆ, “ಸೌರಭ್ ಅವರ ತಂದೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಧೀರಜ್ ಮತ್ತು ಮೋನು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.”
‘ಪ್ರೆಸಿಡೆಂಟ್ಸ್ ಬಾಡಿಗಾರ್ಡ್’ (ರಾಷ್ಟ್ರಪತಿಗಳ ಅಂಗರಕ್ಷಕ ದಳ) ಭಾರತೀಯ ಸೇನೆಯ ಅತ್ಯಂತ ಹಳೆಯ ಮತ್ತು ಹಿರಿಯ ಅಶ್ವಸೈನ್ಯದ ರೆಜಿಮೆಂಟ್ ಆಗಿದ್ದು, ಇದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಿಯೋಜಿತವಾಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಚಹಾ ಮತ್ತು ಸಮೋಸಾಗಳ ವಿಚಾರವಾಗಿ ನಡೆದ ಜಗಳದ ನಂತರ 17 ವರ್ಷದ ಬಾಲಕನೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ.

