HomeIndiaಪಟಾಕಿ ಸಂಗ್ರಹಿಸಿಟ್ಟಿದ್ದ ಅಂಗಡಿಯಲ್ಲಿ ಭೀಕರ ಸ್ಫೋಟ: 16 ವರ್ಷದ ಯುವಕ ಸ್ಥಳದಲ್ಲೇ ಸಾವು

ಪಟಾಕಿ ಸಂಗ್ರಹಿಸಿಟ್ಟಿದ್ದ ಅಂಗಡಿಯಲ್ಲಿ ಭೀಕರ ಸ್ಫೋಟ: 16 ವರ್ಷದ ಯುವಕ ಸ್ಥಳದಲ್ಲೇ ಸಾವು

ಮುಂಬೈ: ಪಟಾಕಿ ಸಂಗ್ರಹಿಸಿಟ್ಟಿದ್ದ ಅಂಗಡಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 16 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮಲಾಡ್‌ನ ಮಲ್ವಾನಿಯಲ್ಲಿ ಪಟಾಕಿ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿ, ಕಟ್ಟಡದ ಮೇಲ್ಛಾವಣಿ (ಸ್ಲ್ಯಾಬ್) ಕುಸಿದು ಬಿದ್ದ ಪರಿಣಾಮ ಹದಿಹರೆಯದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂಬೈನ ಮಲಾಡ್ ಪ್ರದೇಶದಲ್ಲಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ ನಂತರ, ಅದರ ಮೇಲ್ಛಾವಣಿ ಕುಸಿದು ಬಿದ್ದು 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಸೋಮವಾರ ರಾತ್ರಿ 9.56ರ ಸುಮಾರಿಗೆ ಮಲ್ವಾನಿಯ ಅಬ್ದುಲ್ ಹಮೀದ್ ಮಾರ್ಗದಲ್ಲಿರುವ ನೆಲಮಹಡಿಯ ಅಂಗಡಿಯೊಂದರಲ್ಲಿ ನಡೆದಿದೆ ಎಂದು ಅವರು ಹೇಳಿದರು.

ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಅಂಗಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ ಮತ್ತು ಬೆಂಕಿ ಕೂಡ ಹೊತ್ತಿಕೊಂಡಿದೆ ಎಂದು ನಾಗರಿಕ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಗಡಿಯ ಒಳಗೆ ಸುಮಾರು 20 ಅಡಿ ಉದ್ದ ಮತ್ತು 30 ಅಡಿ ಅಗಲದಷ್ಟು ಜಾಗದಲ್ಲಿ ಪಟಾಕಿಗಳು, ವಿದ್ಯುತ್ ತಂತಿಗಳು ಮತ್ತು ಇತರ ಉಪಕರಣಗಳಿಗೆ ಬೆಂಕಿ ವ್ಯಾಪಿಸಿತ್ತು. ಅಗ್ನಿಶಾಮಕ ದಳದವರು ರಾತ್ರಿ 10.36ರ ವೇಳೆಗೆ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಯ ನಂತರ ನಾಪತ್ತೆಯಾಗಿದ್ದ ಬಾಲಕನೊಬ್ಬ, ನಂತರ ಅಂಗಡಿಯ ಒಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತಪಟ್ಟ ಬಾಲಕನನ್ನು ಶಾನವಾಜ್ ನಿಯಾಜ್ ಖಾನ್ ಎಂದು ಗುರುತಿಸಲಾಗಿದ್ದು, ಆತ ಶೇಕಡಾ 100ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದನು ಎಂದು ಅವರು ಮಾಹಿತಿ ನೀಡಿದ್ದಾರೆ.

ಪಟಾಕಿ ಅವಘಡ: ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮಕ್ಕಳ ಕಣ್ಣಿಗೆ ಗಾಯ

ಬೆಂಗಳೂರು: ಅಂಧಕಾರವನ್ನು ಹೋಗಲಾಡಿಸಿ ದೀಪವನ್ನು ಬೆಳಗಿಸಿ ಬೆಳಕಿನ ದಾರಿ ತೋರಿಸಬೇಕಾದ ದೀಪಾವಳಿ ಹಬ್ಬದ ಸಂಭ್ರಮದ ಪಟಾಕಿ ಹಲವರ ಬಾಳಲ್ಲಿ ಕತ್ತಲನ್ನು ತಂದಿದೆ. ದೀಪಾವಳಿ ಹಬ್ಬದ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಹಲವು ಅವಘಡಗಳು ಸಂಭವಿಸಿದ್ದು, ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಅನೇಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡಗಳಿಂದಾಗಿ ಹಲವರು ಕಣ್ಣುಗಳಿಗೆ ಗಂಭೀರವಾಗಿ ಬೆಂಗಳೂರಿನಲ್ಲಿ ಆತಂಕ ಮೂಡಿಸಿವೆ. ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡ 100ಕ್ಕೂ ಹೆಚ್ಚು ಮಂದಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಗಾಯಾಳುಗಳಲ್ಲಿ ಮಕ್ಕಳು ಮತ್ತು ಪುಟ್ಟ ಕಂದಮ್ಮಗಳೂ ಇರುವುದು ಆತಂಕಕಾರಿ ಸಂಗತಿಯಾಗಿದೆ. ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಅಕ್ಕಪಕ್ಕದಲ್ಲಿ ನಿಂತು ನೋಡುತ್ತಿದ್ದವರೂ ಗಾಯಗೊಂಡಿರುವುದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಗರದ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಕೇಂದ್ರವೊಂದರಲ್ಲೇ 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ರಾಜಾಜಿನಗರ ಕೇಂದ್ರದಲ್ಲಿ ಗಾಯಗೊಂಡ 41 ಮಂದಿಯಲ್ಲಿ 24 ಮಂದಿ 18 ವರ್ಷದೊಳಗಿನ ಮಕ್ಕಳು. 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಪಕ್ಕದಲ್ಲಿ ನಿಂತಿದ್ದಾಗ ಗಾಯಗೊಂಡಿದ್ದಾರೆ. 40 ಮಂದಿಗೆ ಔಷಧೋಪಚಾರ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮಿಂಟೋ ನೇತ್ರ ಆಸ್ಪತ್ರೆಯಲ್ಲಿ 14 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 10 ಮಂದಿಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಮಂದಿಗೆ ಸಾಮಾನ್ಯ ಗಾಯಗಳಾಗಿವೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಇನ್ನು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ಪ್ರಕರಣಗಳು ದಾಖಲಾಗಿವೆ. ಗಾಯಾಳುಗಳಲ್ಲಿ ಕೇವಲ ಮೂರು ತಿಂಗಳ ಹಸುಗೂಸಿನಿಂದ 46 ವರ್ಷದ ವಯಸ್ಕರವರೆಗೂ ಇದ್ದಾರೆ. ಐದು ತಿಂಗಳ ಮಗುವಿಗೆ ಪಟಾಕಿಯಿಂದ ಸ್ವಯಂ ಗಾಯವಾಗಿರುವ ಪ್ರಕರಣವೂ ವರದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಲವರ ಬದುಕಲ್ಲಿ ಅಂಧಕಾರವನ್ನು ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular