ಹಾಸನ: ಹಾಸನ ಜಿಲ್ಲಾಧಿಕಾರಿ ಪಿಎ ಶಶಿಕಿರಣ್ ವಾಟ್ಸ್ಆ್ಯಪ್ ಚಾಟ್ ಪ್ರಕರಣ ಸಂಬಂಧ ಡಿಸಿ ಕೆ.ಎಸ್.ಲತಾಕುಮಾರಿ ಅವರಿಗೆ ಹಾಸನ ಸಂಸದ ಶ್ರೇಯಸ್ ಪಟೇಲ್ ಪತ್ರ ಬರೆದಿದ್ದಾರೆ.
ಪಿಎ ಶಶಿಕಿರಣ್ರನ್ನು ಬೇರೆಡೆಗೆ ನಿಯೋಜಿಸುವಂತೆ ಆಗ್ರಹಿಸಿದ್ದಾರೆ. ಶಶಿಕಿರಣ್ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು, ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಈ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶಶಿಕಿರಣ್ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯ ಯಾವುದೇ ಕರ್ತವ್ಯದಲ್ಲೂ ಮುಂದುವರಿಸದೆ, ಡಿಸಿ ಕಚೇರಿಯಿಂದ ಹೊರಗೆ ಬೇರೆ ಸೂಕ್ತ ಸರ್ಕಾರಿ ಕಚೇರಿಗೆ ವರ್ಗಾಯಿಸಿ ನಿಯೋಜಿಸಬೇಕು. ಆರೋಪಗಳ ಕುರಿತು ನಡೆಸುವ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀಳದಂತೆ ಅಗತ್ಯ ಕ್ರಮ ಕೈಗೊಂಡು, ಈ ಮನವಿಯ ಮೇರೆಗೆ ಕೈಗೊಂಡ ಕ್ರಮಗಳ ಬಗ್ಗೆ ಲಿಖಿತವಾಗಿ ತಿಳಿಸುವಂತೆ ವಿನಂತಿ ಮಾಡುವುದಾಗಿ ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಹಾಸನ ಡಿಸಿ ಪಿಎ ಶಶಿಕಿರಣ್ರದ್ದು ಎನ್ನಲಾದ ವಾಟ್ಸ್ಆ್ಯಪ್ ಚಾಟ್ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಬಿಡುಗಡೆ ಮಾಡಿದ್ದರು. ಇವನ್ನು ತನೆಗೆ ಯಾವುದೋ ಅಧಿಕಾರಿ ತಂದುಕೊಟ್ಟು ಹೋಗಿರುವುದಾಗಿಯೂ ತಿಳಿಸಿದ್ದರು. ಮೂರು ಕ್ರಷರ್ ಅನುಮತಿಗಾಗಿ 60 ಲಕ್ಷ ರೂ. ಲಂಚ ಕೇಳಿದ್ದ ಆರೋಪ ಮಾತ್ರವಲ್ಲದೆ ಡಿಸಿ ಲತಾಕುಮಾರಿ ಹಾಸನದಲ್ಲೇ ಉಳಿಯಲು ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಿರುವ ಸಂಬಂಧ ಮಾತುಕತೆ ಕೂಡ ಈ ಚಾಟ್ಗಳಲ್ಲಿ ಕಂಡುಬಂದಿತ್ತು. ರಾಜ್ಯಾದ್ಯಂತ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶ ಸೃಷ್ಟಿಸಿ ಹರಡಲಾಗುತ್ತಿದೆ. ಇದರಿಂದ ವೈಯಕ್ತಿಕ ವರ್ಚಸ್ಸು, ಆಡಳಿತಾತ್ಮಕವಾಗಿ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿ ಶಶಿಕಿರಣ್ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

