ಸರ್ಕಾರಿ ಉದ್ಯೋಗ ಸಿಕ್ಕರೆ ಜೀವನದಲ್ಲಿ ಭದ್ರತೆ ಇದೆ ಎಂಬ ನಂಬಿಕೆ ಹಲವರದ್ದು. ಆದರೆ, ಸರ್ಕಾರಿ ನೌಕರರು ಮಾಡುವ ಒಂದು ತಪ್ಪು ಅವರ ಉದ್ಯೋಗದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗೂ ಹೆಚ್ಚು ಕಾಲ ಜೈಲು ಅಥವಾ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಅಂತಹ ನೌಕರರನ್ನು ಪ್ರತ್ಯೇಕ ಆದೇಶವಿಲ್ಲದೆಯೇ ಅಮಾನತುಗೊಂಡಂತೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಾದರೆ, ಸುಪ್ರೀಂ ಕೋರ್ಟ್ ಹೇಳಿದ್ದೇನು? ಯಾವ ನಿಯಮದಡಿ ಈ ಕ್ರಮ ಕೈಗೊಳ್ಳಲಾಗುತ್ತದೆ? ಇಲ್ಲಿದೆ ವಿವರ.
ಸರ್ಕಾರಿ ನೌಕರರು ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಅಮಾನತುಗೊಂಡವರು (Deemed Suspension) ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅಮಾನತು ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನ್ಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಬಿಹಾರದ ಸಮಸ್ತಿಪುರ ಸದರ್ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ವೇತನ ಬಿಡುಗಡೆ ಮಾಡಲು 4,000 ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು. ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಸೆಷನ್ಸ್ ಕೋರ್ಟ್ ಜಾಮೀನು ನೀಡಿತ್ತು.
ಆದರೆ, ಈ ಜಾಮೀನನ್ನು ಪ್ರಶ್ನಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಜಾಮೀನು ರದ್ದುಗೊಳಿಸಿ ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಉದ್ಯೋಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನನ್ನು ಮರುಸ್ಥಾಪಿಸಿತು. ಜೊತೆಗೆ, ಸರ್ಕಾರಿ ನೌಕರನೊಬ್ಬ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದರೆ, ನಿಯಮದ ಪ್ರಕಾರ ಆತ ಸ್ವಯಂಚಾಲಿತವಾಗಿ ಅಮಾನತುಗೊಂಡಂತೆ ಪರಿಗಣಿಸಲ್ಪಡುತ್ತಾನೆ ಎಂದು ಸ್ಪಷ್ಟಪಡಿಸಿತು.ಇದಕ್ಕೆ ಪ್ರತ್ಯೇಕ ಅಮಾನತು ಆದೇಶದ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಮಾನತು ತೆರವುಗೊಳಿಸಿದ್ದಕ್ಕೆ ನ್ಯಾಯಪೀಠ ಅಸಮಾಧಾನ
ಬಂಧನದ ಬಳಿಕ ಅಮಾನತುಗೊಂಡಿದ್ದ ಉದ್ಯೋಗಿಯ ಅಮಾನತನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಿ, ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಈ ವಿಚಾರವನ್ನು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರಕ್ಕೆ ಸೂಚಿಸಿದೆ.
ಗಮನಿಸಿ: 48 ಗಂಟೆಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿರುವುದು ಅಮಾನತು ನಿಯಮಕ್ಕೆ ಒಳಪಟ್ಟಿರುತ್ತದೆ. ಇದು ಎಲ್ಲ ಪ್ರಕರಣಗಳಲ್ಲೂ ಉದ್ಯೋಗ ಕಳೆದುಕೊಳ್ಳುವುದು ಅಥವಾ ಸೇವೆಯಿಂದ ವಜಾಗೊಳಿಸುವುದು ಎಂದರ್ಥವಲ್ಲ.
Disclaimer: ಈ ಸುದ್ದಿಯು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಲಭ್ಯವಿರುವ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಸರ್ಕಾರಿ ನೌಕರರ ಅಮಾನತು ಪ್ರಕ್ರಿಯೆಯು ಸಂಬಂಧಿತ ಸೇವಾ ನಿಯಮಗಳು, ಪ್ರಕರಣದ ಸ್ವರೂಪ ಮತ್ತು ಅನ್ವಯಿಸುವ ಕಾನೂನು ನಿಬಂಧನೆಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನ್ಯಾಯಾಲಯದ ಆದೇಶ ಹಾಗೂ ಸಂಬಂಧಿತ ಇಲಾಖೆಯ ನಿಯಮಗಳನ್ನು ಪರಿಶೀಲಿಸಿ.

