HomeInternationalಅಮೆರಿಕದಲ್ಲಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿ! ಮಕ್ಕಳ ಮುಂದೆಯೇ ಭಾರತೀಯರ ವಿರುದ್ಧ ಟ್ರಂಪ್ ಬೆಂಬಲಿಗರ ದ್ವೇಷದ ಘೋಷಣೆ!

ಅಮೆರಿಕದಲ್ಲಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿ! ಮಕ್ಕಳ ಮುಂದೆಯೇ ಭಾರತೀಯರ ವಿರುದ್ಧ ಟ್ರಂಪ್ ಬೆಂಬಲಿಗರ ದ್ವೇಷದ ಘೋಷಣೆ!

ವಾಷಿಂಗ್ಟನ್: ಬಣ್ಣಬಣ್ಣದ ದೀಪಗಳು, ಸಾಂಪ್ರದಾಯಿಕ ಉಡುಗೆ, ಮಕ್ಕಳ ನೃತ್ಯ ಪ್ರದರ್ಶನ, ಸಂಭ್ರಮದ ವಾತಾವರಣ… ಅಮೆರಿಕದ ಸಿಯಾಟಲ್‌ನಲ್ಲಿ ಭಾರತೀಯರು ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸುತ್ತಿದ್ದರು. ಆದರೆ ಈ ಸಂಭ್ರಮದ ನಡುವೆ ಏಕಾಏಕಿ ಇಬ್ಬರು ಪ್ರತಿಭಟನಾಕಾರರು ಆಕ್ಷೇಪಾರ್ಹ ಫಲಕಗಳನ್ನು ಹಿಡಿದು ಪ್ರತ್ಯಕ್ಷರಾಗಿದ್ದಾರೆ. ಭಾರತೀಯರು ಮತ್ತು ಹಿಂದೂಗಳ ವಿರುದ್ಧ ದ್ವೇಷದ ಘೋಷಣೆಗಳನ್ನು ಕೂಗಿದ್ದಾರೆ. ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲೇ ಇಂತಹ ಘಟನೆ ನಡೆದಿರುವುದು ಭಾರತೀಯ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳ ಕಾರ್ಯಕ್ರಮದ ನಡುವೆಯೇ ದ್ವೇಷದ ಘೋಷಣೆ!

ಅಮೆರಿಕದ ಸಿಯಾಟಲ್ ಸೆಂಟರ್ ಆರ್ಮರಿಯಲ್ಲಿ ಭಾರತೀಯ ಸಮುದಾಯದವರು ದೀಪಾವಳಿ ಆಚರಣೆ ಆಯೋಜಿಸಿದ್ದರು. ಈ ವೇಳೆ ಇಬ್ಬರು ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.

ಅವರು ಹಿಡಿದಿದ್ದ ಫಲಕಗಳಲ್ಲಿ ಹಿಂದೂಗಳು ಮತ್ತು ಭಾರತೀಯರ ವಿರುದ್ಧ ಆಕ್ಷೇಪಾರ್ಹ ಸಂದೇಶಗಳಿದ್ದವು. ಕ್ರಿಶ್ಚಿಯನ್ನರ ಬದಲಿಗೆ ಹಿಂದೂಗಳನ್ನು ನೆಲೆಸಿಸುವುದನ್ನು ನಿಲ್ಲಿಸಬೇಕು, ಅವರನ್ನು ಹೊರಹಾಕಬೇಕು ಎಂಬ ಅರ್ಥದ ಘೋಷಣೆಗಳನ್ನು ಕೂಗಿದ್ದಾರೆ. ತಿಲಕ ಧರಿಸುವವರನ್ನೂ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದವರಲ್ಲಿ ಆತಂಕ ಮೂಡಿಸಿದೆ. ಬಳಿಕ ಪ್ರತಿಭಟನಾಕಾರರನ್ನು ಕಾರ್ಯಕ್ರಮದ ಸ್ಥಳದಿಂದ ಹೊರಹಾಕಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಮೀಳಾ ಜಯಪಾಲ್ ತೀವ್ರ ಖಂಡನೆ

ಘಟನೆಗೆ ಅಮೆರಿಕದ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಜನಾಂಗೀಯ ದ್ವೇಷದ ಪ್ರದರ್ಶನ ಎಂದು ಖಂಡಿಸಿದ್ದಾರೆ.ದೀಪಾವಳಿ ಪ್ರಮುಖ ಹಬ್ಬವಾಗಿದ್ದು, ಪ್ರತಿಯೊಂದು ಸಮುದಾಯಕ್ಕೂ ಯಾವುದೇ ಭಯವಿಲ್ಲದೆ ಸುರಕ್ಷಿತ ವಾತಾವರಣದಲ್ಲಿ ತಮ್ಮ ಹಬ್ಬಗಳನ್ನು ಆಚರಿಸುವ ಹಕ್ಕಿದೆ ಎಂದು ಹೇಳಿದ್ದಾರೆ.

ಭಾರತೀಯರನ್ನೇ ಚುನಾವಣಾ ಸೋಲಿಗೆ ಹೊಣೆ ಮಾಡಿದ್ದಾರಾ?

ಮಾಜಿ ವೈಟ್‌ಹೌಸ್ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಅಮೆರಿಕದ ಹಿಂದೂಗಳು ಮತ್ತು ಭಾರತೀಯ ವಲಸಿಗರನ್ನು ಜನಾಂಗೀಯ ದ್ವೇಷದ ಮೂಲಕ ಗುರಿಯಾಗಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಹಿಂದೂಗಳು ಮತ್ತು ಭಾರತೀಯರೇ ಕಾರಣ ಎಂಬ ಆರೋಪಗಳನ್ನು ಟ್ರಂಪ್ ಬೆಂಬಲಿಗರು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಜಾಕ್ ಲಾಂಗ್ ಯಾರು?

ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರಲ್ಲಿ ಟ್ರಂಪ್ ಬೆಂಬಲಿಗ ಜಾಕ್ ಲಾಂಗ್ ಕೂಡ ಒಬ್ಬರು ಎಂದು ವರದಿಯಾಗಿದೆ. 2021ರ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಅವರ ಮೇಲಿತ್ತು. ಜೈಲು ಶಿಕ್ಷೆಯ ಬಳಿಕ ಅಧ್ಯಕ್ಷೀಯ ಕ್ಷಮಾದಾನದ ಮೂಲಕ ಬಿಡುಗಡೆಯಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.

ಹಿಂದೂ ಸಂಘಟನೆಗಳಿಂದ ಆತಂಕ

ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (Coalition of Hindus of North America) ಕೂಡ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಇಂತಹ ಪ್ರತಿಭಟನೆ ನಡೆಸಿ ಭಯದ ವಾತಾವರಣ ಸೃಷ್ಟಿಸಿರುವುದು ಖಂಡನೀಯ ಎಂದು ಹೇಳಿದೆ.

ಒಂದು ಕಡೆ ವಿದೇಶದಲ್ಲಿದ್ದರೂ ತಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಭಾರತೀಯರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಇಂತಹ ದ್ವೇಷದ ಘಟನೆಗಳು ಅವರ ಸಂಭ್ರಮಕ್ಕೆ ಆತಂಕ ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುವ ಹಿಂದೂಗಳು ಮತ್ತು ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಸಂಘಟನೆ ಮನವಿ ಮಾಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular